ಅಡಕಲ್‌ನಲ್ಲಿ ಬೀಡುಬಿಟ್ಟ ಬೀಟಮ್ಮ ಗುಂಪು

0 192

ಚಿಕ್ಕಮಗಳೂರು: ಬೀಟಮ್ಮ ಮತ್ತು ಭೀಮ ನೇತೃತ್ವದ ಕಾಡಾನೆಗಳ ಗುಂಪು ಈಗ ಅಡಕಲ್‌ನಲ್ಲಿ ಬೀಡುಬಿಟ್ಟಿವೆ.

ಕಾರೆಮನೆಯತ್ತ ತೆರಳಿದ್ದ ಆನೆಗಳ ಹಿಂಡನ್ನು ಪಟಾಕಿ ಸಿಡಿಸಿ ಓಡಿಸಲಾಯಿತು. ಅವುಗಳು ಮತ್ತೆ ಚಿಕ್ಕೊಳಲೆಯತ್ತ ಪಯಣ ಬೆಳೆಸಿದ್ದವು. ಅಲ್ಲಿಂದ ಶುಕ್ರವಾರ ರಾತ್ರಿ ಗಡಬನಹಳ್ಳಿಗೆ ಹೋಗಿದ್ದ ಇವುಗಳು ಬಳಿಕ ನಲ್ಲೂರು ಗುಡ್ಡದಲ್ಲಿದ್ದವು.

ಶನಿವಾರ ರಾತ್ರಿ ಅಡಕಲ್‌ಗೆ ಬಂದಿವೆ. ಅಲ್ಲಿ ತೋಟದ ಪಕ್ಕದಲ್ಲಿರುವ ಕಾಡಿನಲ್ಲಿ ಕಾಲಕಳೆಯುತ್ತಿವೆ. ಭಾನುವಾರ ರಾತ್ರಿ ಮುಳ್ಳೋರೆ ಮೂಲಕ ವಸ್ತಾರೆ ಕಡೆಗೆ ಸಾಗುವ ಸಾಧ್ಯತೆಗಳಿವೆ. ಅದೇ ಮಾರ್ಗವಾಗಿ ಹೋಗಲು ಆರಂಭಿಸಿದರೆ. ಕೆ.ಆರ್.ಪೇಟೆ ಮೂಲಕ ಮೂಲಸ್ಥಾನಕ್ಕೆ ತೆರಳುವ ಸಾಧ್ಯತೆಗಳಿವೆ.

ಬೀಟಮ್ಮನ ಮುಂದಾಳತ್ವ ಸಾಗುತ್ತಿರುವ ಗಜಪಡೆಗಳು ನೀರುಸಿಗುವ ಜಾಗವನ್ನು ನೋಡಿಕೊಂಡು ಅಲ್ಲೆ ಉಳಿಯುವ ಉಪಾಯ ಮಾಡುತ್ತಿವೆ. ಬಾಳೆ, ಬೈನೆಸೊಪ್ಪು, ಈ ಮರದ ತಿರುಳನ್ನು ಸೇವಿಸುವುದರೊಂದಿಗೆ ಕಾಲ ಕಳೆಯುತ್ತಿವೆ.

ಆನೆ ನಿಗ್ರಹಪಡೆಯ 8 ಮಂದಿ ಇರುವ ಎರಡು ತಂಡಗಳು ಆನೆಗಳು ಇರುವ ಜಾಗದಿಂದ 300 ಮೀಟರ್ ಅಂತರದಲ್ಲಿ ಹಗಲುರಾತ್ರಿ ಪಾಳಿಯಂತೆ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಊರಿನತ್ತ ಮುಖಮಾಡದಂತೆ ಎಚ್ಚರಿಕೆಯಿಂದ ಅವುಗಳನ್ನು ಕಾಡಿನತ್ತ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ನಿರತವಾಗಿವೆ.

ಅಡಕಲ್ ಸುತ್ತಮುತ್ತಲಿರುವ ಗ್ರಾಮಗಳ ಜನರು ತಿರುಗಾಡದಂತೆ ಹಾಗೂ ತೋಟಗಳಿಗೆ ಕೆಲಸ ನಿರ್ವಹಿಸಲು ಮುಂದಾಗದಂತೆ ಮನವರಿಕೆ ಮಾಡಿಕೊಡುವ ಕೆಲಸವೂ ನಡೆದಿದೆ. ಸಾಗುವ ಮಾರ್ಗದಲ್ಲಿ ಸಿಗುವ ಸೊಪ್ಪುಗಳನ್ನು ಸೇವಿಸುತ್ತಾ ಮುನ್ನೆಡೆಯುವ ಗಜಪಡೆಯ ಗುಂಪು ನೀರಿನ ಸ್ಥಳವನ್ನು ನೋಡಿಕೊಂಡು ಜಾಂಡಹೂಡುತ್ತಿವೆ.

ತಿನ್ನಲು ಆಹಾರ ಕುಡಿಯಲು ನೀರು ಸಿಗುತ್ತಿರುವುದರಿಂದ ಮೂಲನೆಲೆಗೆ ತೆರಳಲು ಇವುಗಳು ಮನಸ್ಸು ಮಾಡುತ್ತಿಲ್ಲ, ಚಿಕ್ಕಮಗಳೂರು ತಾಲೂಕಿನಲ್ಲೇ ರೌಂಡ್‌ಹೊಡೆಯುತ್ತಿವೆ. ಭಾನುವಾರ ರಾತ್ರಿ ಎತ್ತಸಾಗುತ್ತವೆ ಎಂಬುದನ್ನು ಕಾದುನೋಡಬೇಕಿದೆ.

Leave A Reply

Your email address will not be published.

error: Content is protected !!