ಚುಕ್ಕಿ ಎಂ ಬ್ಯಾಣದ್’ಗೆ ಕಲಾಶ್ರೀ ಪ್ರಶಸ್ತಿ ; ಶಾಸಕ ಬೇಳೂರಿಂದ ಸನ್ಮಾನ

Written by malnadtimes.com

Published on:

HOSANAGARA ; ವಾಲ್ಮೀಕಿ ರಾಮಾಯಣವನ್ನು ಕೇವಲ ಮೂರು ನಿಮಿಷದಲ್ಲಿ ಯಕ್ಷಗಾನದ ಮೂಲಕ ಅಭಿನಯಿಸಿ 2024ರ ಕಲಾಶ್ರೀ ಪ್ರಶಸ್ತಿಗೆ ಪಾತ್ರಳಾದ ಬಟ್ಟೆಮಲ್ಲಪ್ಪ ಗ್ರಾಮದ ಕು. ಚುಕ್ಕಿ ಎಂ ಬ್ಯಾಣದ ವಿದ್ಯಾರ್ಥಿನಿಯನ್ನು ತ್ರೈಮಾಸಿಕ ಕೆಡಿಪಿ ಸಭೆ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಆತ್ಮೀಯವಾಗಿ ಸನ್ಮಾನಿಸಿದರು.

WhatsApp Group Join Now
Telegram Group Join Now
Instagram Group Join Now

ಸಾಧನೆ ಮತ್ತು ವಿವರ : 

2012ರ ಮಾರ್ಚ್ 29 ರಂದು ಜನಿಸಿದ ಈಕೆಯ ತಂದೆ ಮಂಜುನಾಥ್ ಎಸ್. ಬ್ಯಾಣದ, ತಾಯಿ  ರಶ್ಮಿ ಮಂಜುನಾಥ್ ಬ್ಯಾಣದ. ಪ್ರಸ್ತುತ ಚುಕ್ಕಿ, ಬಟ್ಟೆಮಲ್ಲಪ್ಪ ಗ್ರಾಮದ ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ನಿರತಳಾಗಿದ್ದಾಳೆ.

ಇವಳು ಶಿಕ್ಷಣದ ಜೊತೆಗೆ ಯಕ್ಷಗಾನ, ಭರತ ನಾಟ್ಯ, ಹಿಂದೂಸ್ಥಾನಿ ಸಂಗೀತ, ಹಾರ್ಮೋನಿಯಂ, ಕರಾಟೆ , ಅಥ್ಲೆಟಿಕ್ಸ್ ಅಭ್ಯಾಸ ಮಾಡುತ್ತಿದ್ದಾಳೆ.

ಕಳೆದ 9 ವರ್ಷಗಳಿಂದ ಯಕ್ಷಗುರು ಪುರಪ್ಪೆಮನೆ ಗ್ರಾಮದ ಎ. ಆರ್. ಗಣಪತಿ ಭಟ್ ಹಾಗೂ ಹೆಬೈಲು ಗ್ರಾಮದ ಭಾಗವತ ಗೋಪಾಲಮೂರ್ತಿ ಇವರಲ್ಲಿ ಯಕ್ಷಗಾನ, ಕಳೆದ ದಶಕದಿಂದ ವಿದುಷಿ ವಸುಧಾ ಶರ್ಮಾ ಅವರ ಶಿಷ್ಯೆ ವಿದುಷಿ ಶ್ರೀರಂಜನಿ ಬಳಿ ಹಿಂದೂಸ್ಥಾನಿ ಸಂಗೀತ ಮತ್ತು ಹಾರ್ಮೋನಿಯಂ ಅಭ್ಯಾಸ ಮಾಡುತ್ತಿದ್ದಾಳೆ.  ಶ್ವೇತಾ ವಿಷ್ಣು ಜಾಯ್ಸ್ ಇವರ ಬಳಿ 3 ವರ್ಷಗಳಿಂದ ಭರತ ನಾಟ್ಯ, ಕರಾಟೆ ಗುರು ಸೆನ್ಸಾಯ್ ನಗರ ರಾಘವೇಂದ್ರರಿಂದ ಕರಾಟೆ ಅಭ್ಯಾಸದಲ್ಲಿ ತೊಡಗಿದ್ದಾಳೆ. ಯಕ್ಷಗಾನದಲ್ಲಿ ಹಲವು ಪ್ರಸಂಗಗಳ ಮೂಲಕ ನಿರಂತರ ಪ್ರದರ್ಶನ ನೀಡುತ್ತಿದ್ದು, ಭರತ ನಾಟ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ವಿವಿಧೆಡೆ ನೀಡಿದ್ದಾಳೆ. ಪ್ರಸ್ತುತ ವ್ಯಾಸ ಮಹರ್ಷಿ ಗುರುಕುಲದ ಮಕ್ಕಳ ಯಕ್ಷ ಕುಟೀರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಲವ-ಕುಶ ಯಕ್ಷಗಾನ ಪ್ರಸಂಗದಲ್ಲಿ ಕುಶನಾಗಿ ಜನಮನ್ನಣೆ ಗಳಿಸಿದ್ದಾಳೆ. ವಿಶೇಷವಾಗಿ ಕರೋನ ಸಂದರ್ಭದಲ್ಲಿ ಜನ ಜಾಗೃತಿಗಾಗಿ ಕೈಗೊಂಡ ಕರೋನ ಸುರ ಧಮನ ಎಂಬ ಯಕ್ಷಗಾನದ ಮೂಲಕ ಎಲ್ಲೆಡೆ ಯಕ್ಷಗಾನ ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿ ಆಗಿದ್ದಾಳೆ. ಈ ಪ್ರಸಂಗದಲ್ಲಿ ವಿಷ್ಣುವಾಗಿ ಅಭಿನಯಿಸಿ ಜನಮನ್ನಣೆ ಗಳಿಸಿದ್ದಾಳೆ.

2023ರಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದ್ವೀತಿಯ ಸ್ಥಾನ, 2024ರಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನಕ್ಕೆ ಭಾಜನಳಾಗಿದ್ದಾಳೆ.

2024ರ 14 ವರ್ಷ ವಯೋಮಾನದೊಳಗಿನ ಕ್ರೀಡಾಕೂಟದಲ್ಲಿ 100 ಮೀ, 400 ಮೀ ಹಾಗೂ ಉದ್ದ ಜಿಗಿತದಲ್ಲಿ ವಲಯ ಮತ್ತು ತಾಲ್ಲುಕು ಮಟ್ಟದಲ್ಲಿ ಮೂರು ವಿಭಾಗಗಳಲ್ಲಿ ಗೆಲುವು ಸಾಧಿಸಿ ವೀರಾಗ್ರಣಿ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ.

ಶೈಕ್ಷಣಿಕ ಸಾಧನೆಯಲ್ಲೂ ಮುಂದಿರುವ ಚುಕ್ಕಿ, ತನ್ನ ನಿರಂತರ ಸಾಧನೆ ಮೂಲಕ ತನ್ನ ಊರು, ಶಾಲೆ, ಪೋಷಕರು, ಗುರುಗಳಿಗೆ ಕೀರ್ತಿ ತಂದಿದ್ದಾಳೆ.

ಶಿವಮೊಗ್ಗ ಜಿಲ್ಲಾಡಳಿತ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ,  ಬಾಲ ಭವನ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ತನ್ನ ಸಹೋದರಿ ಚಿನ್ಮಯಿ ಎಂ.ಬ್ಯಾಣದ ಜೊತೆಗೆ ಸಹಪಾಠಿ ಪ್ರುತ್ವಿಕಾ ಯು.ಶೆಟ್ಟಿ ಸಹಭಾಗಿತ್ವದಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದು, ರಾಜ್ಯ ಮಟ್ಟದ ಕಲಾ ಶ್ರೀ ಶಿಬಿರಕ್ಕೆ ಆಯ್ಕೆಯಾಗಿದ್ದಳು. 

ಇದೇ ನವೆಂಬರ್ 27ರಿಂದ 29ರವರೆಗೆ ಬೆಂಗಳೂರು ಕಬ್ಬನ್ ಪಾರ್ಕ್ ಆವರಣದಲ್ಲಿನ ಜವಾಹರ್ ಬಾಲ ಭವನ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಹಮ್ಮಿಕೊಂಡಿದ್ದ ಮೂರು ದಿನಗಳ ಕಲಾ ಶ್ರೀ ಶಿಬಿರದಲ್ಲಿ ಪಾಲ್ಗೊಂಡ ಕುಮಾರಿ ಚುಕ್ಕಿ ಎಂ ಬ್ಯಾಣದ್, ಅಂತಿಮವಾಗಿ  ಸೃಜನಾತ್ಮಕ ಕಲೆಯಾದ ಜಾನಪದ ವಿಭಾಗದಲ್ಲಿ ಸ್ಪರ್ಧಿಸಿ ವಾಲ್ಮೀಕಿ ರಾಮಾಯಣವನ್ನು ಮೂರು ನಿಮಿಷದಲ್ಲಿ ಯಕ್ಷಗಾನದ ಮೂಲಕ ಪ್ರದರ್ಶಿಸಿ ಪ್ರಥಮ ಸ್ಥಾನದೊಂದಿಗೆ 2024ನೇ ಸಾಲಿನ ಕಲಾ ಶ್ರೀ ಪ್ರಶಸ್ತಿ ಪಡೆದುಕೊಂಡಿರುತ್ತಾಳೆ‌.

Leave a Comment