ಹೊಂಬುಜ ; “ಧರ್ಮಪಥದ ಜೀವನವು ಸಮ್ಯಕ್ತ್ವ ಗುಣಗಳಿಂದ ಶ್ರೇಷ್ಠವೆನಿಸುವುದು. ಪ್ರಾಚೀನ ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ, ವಿಶ್ವವಂದನೀಯ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯು 1400 ವರ್ಷಗಳಿಂದ ಭಕ್ತರ ಶ್ರದ್ಧಾಭಕ್ತಿಯ ಪುಣ್ಯಕ್ಷೇತ್ರವಾಗಿದೆ. ತೀರ್ಥಂಕರರ ಉಪದೇಶಗಳು ಮತ್ತು ಮಹಾಮಾತೆ ಶ್ರೀ ಪದ್ಮಾವತಿ ದೇವಿ ಕೃಪಾಶೀರ್ವಾದವು ಭಕ್ತರನ್ನು ಸದಾ ಹರಸುತ್ತಿರುವುದು” ಎಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪ್ರವಚನದಲ್ಲಿ ವಿವಿಧ ಜೈನಾಚಾರ್ಯರುಗಳ ಕುರಿತು ಉಲ್ಲೇಖಿಸಿ ತಿಳಿಸಿದರು.

ಶ್ರೀಗಳವರ 14ನೇ ಪಟ್ಟಾಭೀಷೇಕ ವರ್ಧಂತ್ಯೋತ್ಸವ ಸಂದರ್ಭದಲ್ಲಿ ಶ್ರೀಗಳವರು ಅನುಗ್ರಹ ಪ್ರವಚನ ಮಾಡುತ್ತಾ “ಶ್ರೀಕ್ಷೇತ್ರದ ಅಭಿವೃದ್ಧಿಯೊಂದಿಗೆ ಪ್ರಾಚೀನ ಜಿನಮಂದಿರ, ಸ್ಮಾರಕಗಳ ಸಂರಕ್ಷಣೆ ಹಾಗೂ ಅಧೀನ ಕ್ಷೇತ್ರಗಳಾದ ಕುಂದಾದ್ರಿ, ಶ್ರೀ ವರಂಗ ಜೈನ ಮಠ- ಜಿನಮಂದಿರ, ಹಟ್ಟಿಯಂಗಡಿ ಜಿನಮಂದಿರಗಳ ಜೀರ್ಣೋದ್ಧಾರ ಕಾರ್ಯಗಳನ್ನು ಸದ್ಭಕ್ತರ, ದಾನಿಗಳ ಸಹಯೋಗದಲ್ಲಿ ಸಾಂಗವಾಗಿ ನೆರವೇರಿಸಲಾಗಿದೆ” ಎನ್ನುತ್ತಾ “ಲೋಕದಲ್ಲಿ ಅಹಿಂಸಾಭಾವ ಮತ್ತು ಪರಸ್ಪರ ಮೈತ್ರಿ ಸಂಘರ್ಷಗಳನ್ನು ದೂರಮಾಡುವಂತಾಗಲಿ” ಎನ್ನುತ್ತಾ ಜೈನ ಧರ್ಮದ ಧರ್ಮಸಂದೇಶವು ವಿಶ್ವಮಾನ್ಯವಾದುದೆಂದರು.

ಶ್ರೀನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಯಲ್ಲಿ ಜಿನಾಗಮೋಕ್ತ ವಿಧಿಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೋಡೋಪಚಾರರ ಪೂಜೆಯ ಬಳಿಕ ಶ್ರೀಗಳವರು ಸರ್ವರಿಗೂ ಶ್ರೀಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಊರ ಪರವೂರ ಭಕ್ತವೃಂದ, ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜ ಶ್ರೀಗಳವರಿಗೆ ಭಕ್ತಿಪೂರ್ವಕ ಶುಭಾಭಿನಂದನೆ ಮಾಡಿದರು. ಪುರೋಹಿತ ಪದ್ಮರಾಜ ಇಂದ್ರರವರು ಸ್ವಸ್ತಿವಾಚನ ಮಾಡಿ ಸಹಪುರೋಹಿತರೊಂದಿಗೆ ಪೂಜಾ ವಿಧಾನ ನೆರವೇರಿಸಿದರು.

ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಕಾಶ ನೇ. ಮಗದುಮ್ಮ, ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ ಹಾಗೂ ಎಲ್ಲ ಸೇವಾಕಾಂಕ್ಷಿ ವರ್ಗದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





