SHIVAMOGGA ; 04 ತಿಂಗಳ ಹಿಂದೆ ಕೆ.ಜಿ.ಗೆ 700 ರೂ.ಗಳಿಗೆ ಏರಿಕೆ ಕಂಡಿದ್ದ ಕಾಳುಮೆಣಸಿನ ಧಾರಣೆ ಇದೀಗ 600 ರೂ.ಗಳಿಗೆ ಕುಸಿದಿದೆ.
ಶ್ರೀಲಂಕಾದಿಂದ ಭಾರತಕ್ಕೆ ಕಳಪೆ ಗುಣಮಟ್ಟದ ಕಾಳುಮೆಣಸಿನ ಆವಕ ಹೆಚ್ಚಿರುವುದು ದೇಸಿ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಹವಾಮಾನ ವೈಪರೀತ್ಯದಿಂದ ಈ ಬಾರಿ ಮಲೆನಾಡಿನಲ್ಲಿ ಕಾಳುಮೆಣಸಿನ ಇಳುವರಿ ಶೇ. 30ರಷ್ಟು ಕುಸಿಯುವ ಸಾಧ್ಯತೆ ಇದೆ. ಇಳುವರಿ ಕುಸಿತದ ಜೊತೆಗೂ ಬೆಲೆಯಲ್ಲೂ ಇಳಿಕೆಯಾಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಶ್ರೀಲಂಕಾ, ವಿಯೆಟ್ನಾಂ, ಬ್ರೆಜಿಲ್, ಈಕ್ವೆಡಾರ್, ಮಡಗಾಸ್ಕರ್‌ನಿಂದ ಭಾರತ ಕಾಳುಮೆಣಸು ಆಮದು ಮಾಡಿಕೊಳ್ಳುತ್ತದೆ. ಕಳೆದ 4 ತಿಂಗಳಲ್ಲಿ 12 ಸಾವಿರ ಟನ್ನಷ್ಟು ಕಾಳುಮೆಣಸು ದೇಶಕ್ಕೆ ಬಂದಿದೆ. ಇದರಲ್ಲಿ ಶ್ರೀಲಂಕಾದಿಂದಲೇ 10 ಸಾವಿರ ಟನ್ನಷ್ಟು ಕಾಳುಮೆಣಸು ಬಂದಿದೆ. ಮುಕ್ತ ವ್ಯಾಪಾರ ಮಾರುಕಟ್ಟೆ ಒಪ್ಪಂದದ ಪ್ರಕಾರ ಶ್ರೀಲಂಕಾದಿಂದ ಭಾರತಕ್ಕೆ 2,500 ಟನ್ ಕಾಳುಮೆಣಸನ್ನು ಯಾವುದೇ ತೆರಿಗೆ ಇಲ್ಲದೆ ತರಬಹುದಾಗಿದೆ.
2,500 ಟನ್‌ಗಿಂತ ಹೆಚ್ಚಿದ್ದರೆ ಮಾತ್ರ ಶೇ. 8ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇದು ವ್ಯಾಪಾರಿಗಳಿಗೆ ಅನುಕೂಲವಾಗಿದ್ದು, ದಾಖಲೆ ಪ್ರಮಾಣದಲ್ಲಿ ಕಾಳುಮೆಣಸಿನ ಆವಕವಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಶ್ರೀಲಂಕಾದಿಂದ ಭಾರತಕ್ಕೆ ಬರುವ ಕಾಳುಮೆಣಸು ಹಗುರವಾಗಿದ್ದು ಹೆಚ್ಚಿನ ತೇವಾಂಶ ಹೊಂದಿದೆ ಎಂಬ ದೂರು ಇದೆ. ಬೆಲೆ ಕಡಿಮೆ ಇರುವುದರಿಂದ ಆಮದು ಮಾಡಿಕೊಂಡ ಕಳಪೆ ಗುಣಮಟ್ಟದ ಕಾಳುಮೆಣಸಿನ ಮಾರಾಟ ಮಾರುಕಟ್ಟೆಯಲ್ಲಿ ಜೋರಾಗಿದೆ. ಪರಿಣಾಮ, ದೇಶದಲ್ಲಿ ಬೆಳೆಯುವ ಗುಣಮಟ್ಟದ ಕಾಳುಮೆಣಸಿಗೆ ಬೆಲೆ ಮತ್ತು ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಮಲೆನಾಡಿನ ಬೆಳೆಗಾರರು.
ಶ್ರೀಲಂಕಾದಿಂದ ಕಾಳುಮೆಣಸು ಆಮದು ಮಾಡಿಕೊಂಡು ಇಲ್ಲಿನ ಉತ್ಪನ್ನದೊಂದಿಗೆ ಮಿಶ್ರಣ ಮಾಡಿ ಅದನ್ನು ವಿದೇಶಕ್ಕೆ ಮರು ರಫ್ತು ಮಾಡುವ ಯತ್ನವೂ ನಡೆಯುತ್ತಿದೆ. ಇದರಿಂದ ಭಾರತದ ಕಾಳುಮೆಣಸಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಟ್ಟ ಹೆಸರು ಬಂದು ಬೆಲೆ, ಬೇಡಿಕೆ ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ.