ಹೊಸನಗರ ; ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಮನೆ ಮನೆಗೆ ಪೊಲೀಸ್ ಯೋಜನೆಯು ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಸೇತುಬಂಧದಂತೆ ಕಾರ್ಯ ನಿರ್ವಹಿಸಲಿದೆ. ಸ್ಥಳೀಯರಿಂದ ಯಾವುದೇ ಸೂಕ್ಷ್ಮ ಮಾಹಿತಿ ಸಂಗ್ರಹಿಸಲು, ಅಪರಾಧ ತಡೆ, ಅಪರಾಧ ಪತ್ತೆಗೆ ಇದು ಸಹಕಾರಿ ಆಗಲಿದೆ ಎಂದು ಇಲ್ಲಿನ ಪೊಲೀಸ್ ಸಬ್ಇನ್‌ಸ್ಪೆಕ್ಟರ್ ಶಂಕರ್ ಪಾಟೀಲ್ ತಿಳಿಸಿದರು.
ಗುರುವಾರ ಠಾಣಾ ಆವರಣದಲ್ಲಿ ಇಲಾಖೆ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದ್ದು, ಇದರಿಂದ ಇಲಾಖೆ ಜನಸ್ನೇಹಿಯಾಗಿ ಉತ್ತಮ ಸೇವೆ ಸಲ್ಲಿಸಲು ಸಹಕಾರಿ ಎಂದರು.
ಈಗಾಗಲೇ ಸರ್ಕಾರ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿದ್ದು, ಸ್ಥಳೀಯವಾಗಿ ಬೀಟ್ ಪೊಲೀಸರು, ತನಿಖಾಧಿಕಾರಿಗಳು ಹಾಗೂ ಪೊಲೀಸ್ ಸ್ವಯಂಸೇವಕರು ನಿಯಮಿತವಾಗಿ ಠಾಣಾ ವ್ಯಾಪ್ತಿಯ ಪ್ರತಿ ಮನೆ ಮನೆಗೆ ಭೇಟಿ ನೀಡುವ ಮೂಲಕ ಸ್ಥಳೀಯ ಸಮಸ್ಯೆ ಕುರಿತಂತೆ ಚರ್ಚಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಯೋಜನೆ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೊಂಡಿದ್ದು, ಪೊಲೀಸರೇ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅವರ ಜ್ವಲಂತ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರಕ್ಕೆ ಮುಂದಾಗುವ ಮೂಲಕ ಇಲಾಖೆ ಬಗ್ಗೆ ಜನರಲ್ಲಿ ಸಕರಾತ್ಮಕ ಅಭಿಪ್ರಾಯ ರೂಪಿಸಲು ಯೋಜನೆ ಸಹಕಾರಿ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಈ ವೇಳೆ ಠಾಣೆಯ ಎಸ್‌ಹೆಚ್‌ಓ ಈರೇಶ್, ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್ ನಾಯ್ಕ್, ಜಗದೀಶ್, ಸದಾನಂದ ನಾಯ್ಕ್, ಮಧುಸೂಧನ್, ಸುನಿಲ್, ಮಹೇಶ್ ಸೇರಿದಂತೆ ವಿವಿಧ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.