SHIVAMOGGA ; ವಿಶ್ವಪ್ರಸಿದ್ದ ಜೋಗ ಜಲಪಾತ ವೀಕ್ಷಣೆಗೆ ತೆರಳಲು ಯೋಜನೆ ಹಾಕಿಕೊಂಡಿದ್ದೀರಾ? ಹಾಗಾದರೆ ನೀವು ಇದನ್ನು ಓದಬೇಕು. ಕಾಮಗಾರಿಯ ಕಾರಣದಿಂದ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳ ಕಾಲ ನಿರ್ಬಂಧಿಸಲಾಗಿದೆ.
ಅಭಿವೃದ್ಧಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಜೋಗ ಜಲಪಾತ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ಜೋಗಜಲಪಾತದ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 1ರಿಂದ ಮಾರ್ಚ್ 15ರವರೆಗೆ 3 ತಿಂಗಳ ಕಾಲ ಸಾರ್ವಜನಿಕರು ಹಗೂ ಪ್ರವಾಸಿಗರಿಗೆ ಜೋಗ ಜಲಪಾತದ ಬಳಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿ ವೇಳೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು, ಪ್ರವಾಸಿಗರು ಸಹಕರಿಸಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.