ಹೊಸನಗರ ; ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ, ತಮ್ಮ ಪಂಚಾಯ್ತಿ ವ್ಯಾಪ್ತಿಯ ನರೇಗಾ, ಜಲಜೀವನ್ ಮಿಷನ್ ಯೋಜನೆಗಳು ಹಾಗು ರಸ್ತೆ, ಒಳಚರಂಡಿ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಅಧ್ಯಕ್ಷೀಯ ಅವಧಿಯಲ್ಲಿ ಜನಪರ ನಿಲುವುಗಳ ಮೂಲಕ ಕರ್ತವ್ಯ ನಿಷ್ಠೆ ತೋರಿ, ಜನಸಾಮಾನ್ಯರೊಂದಿಗೆ ಬೆರೆತು, ಪ್ರಗತಿಪರ ಕಾರ್ಯಗಳಿಂದ ಖ್ಯಾತರಾಗಿರುವ ತಾಲೂಕಿನ ಎಂ.ಗುಡ್ಡೇಕೊಪ್ಪ ಅಧ್ಯಕ್ಷ ಜಿ.ಎಂ. ಪ್ರವೀಣ್ ಅವರಿಗೆ ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ನೀಡುವ 2025-26ನೇ ಸಾಲಿನ ಕರ್ನಾಟಕ ಪಂಚಾಯತ್ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯದ ಪಂಚಾಯ್ತಿಗಳ ಅಭಿವೃದ್ದಿ, ಗ್ರಾಮ ಸ್ವರಾಜ್ಯ ಪರಿಕಲ್ಪನೆ, ಗಾಂಧಿಜೀ ಅವರ ಗ್ರಾಮ ರಾಜ್ಯದ ಕಲ್ಪನೆ ಹಾಗೂ ಸಂವಿಧಾನದ ಆಶಯದಂತೆ ಗ್ರಾಮಗಳ ಸಬಲೀಕರಣ ಮೂಲಕ ನೇರ ಆಡಳಿತ ಚುಕ್ಕಾಣಿಗೆ ರಾಜ್ಯದ 25 ಗ್ರಾಮ ಪಂಚಾಯತಿಗಳಲ್ಲಿ ಎಂ.ಗುಡ್ಡೇಕೊಪ್ಪ ಸಹ ಒಂದಾಗಿದೆ ಎಂಬುದೇ ಸಂತಸದ ಸಂಗತಿ. ಈ ಹಿನ್ನಲೆಯಲ್ಲಿ ಇದೇ ಏಪ್ರಿಲ್ 24ರ ಗುರುವಾರ ಬೆಂಗಳೂರಿನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ತಮಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಗುವುದು ಎಂದು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ರಮೇಶ್ ಪತ್ರ ಮುಖೇನ ತಿಳಿಸಿದ್ದಾರೆ.