ಹೊಸನಗರ ; ವಿದ್ಯಾರ್ಥಿ ದಿಸೆಯಲ್ಲೆ ಮಕ್ಕಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಶಿವಮೊಗ್ಗದ ಪ್ರೊ. ಡಿ.ಎಸ್. ನಾಗರಾಜ್ ಸಲಹೆ ನೀಡಿದರು.
ತಾಲ್ಲೂಕಿನ ಕೋಡೂರು ಪ್ರೌಢಶಾಲೆಯಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಕುನ್ನೂರು ಜಾನಕಮ್ಮ ಮಂಜಪ್ಪ ಮತ್ತು ಕೀಳಂಬಿ ಸುಬ್ಬರಾವ್ ದತ್ತಿನಿಧಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.
ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಯಬೇಕಾದರೆ ಮೊದಲು ಓದುವ ಅಭ್ಯಾಸವಾಗಬೇಕು. ಅದರಲ್ಲೂ ದಿನಪತ್ರಿಕೆಯನ್ನು ಓದುವುದರ ಮೂಲಕ ಪ್ರಾರಂಭವಾಗುವ ಓದುವ ಅಭ್ಯಾಸ ನಂತರ ವಾರ ಪತ್ರಿಕೆಗಳು ಚಂದಮಾಮ, ಮಯೂರದಂತಹ ಪತ್ರಿಕೆಗಳನ್ನು ಓದುವುದು, ಅದರಲ್ಲಿನ ನೀತಿ ಕಥೆಗಳಿಂದ ಜ್ಞಾನವು ವೃದ್ಧಿಗೆ ಸಹಕಾರಿ ಆಗುವ ಜೊತೆಗೆ ಓದಿನಲ್ಲಿ ಆಸಕ್ತಿ ಹೆಚ್ಚಿಸುವುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ನಾಗರಕೊಡಿಗೆ ಗಣೇಶಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದತ್ತಿ ನಿಧಿಯಿಂದ ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳ ಆಯೋಜನೆಗೆ ಸಹಕಾರಿ ಎಂದ ಅವರು ಶಾಲೆಗಳಲ್ಲಿ ಕಾರ್ಯಕ್ರಮ ಆಯೋಜನೆಯೂ ಮಕ್ಕಳಿಗೆ ದತ್ತಿದಾನಿಗಳ ಪರಿಚಯ ಆಗುವುದೆ ಅಲ್ಲದೇ, ದತ್ತಿದಾನ ನೀಡುವವರಿಗೆ ಪ್ರೋತ್ಸಾಹ ನೀಡುವಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸುಷ್ಮಾ ದತ್ತಿದಾನಿ ನಿವೃತ್ತ ಶಿಕ್ಷಕ ವಸಂತ್ , ಪ್ರಮುಖರಾದ ಜಿ. ಎನ್ ಬಸಪ್ಪಗೌಡ, ಶಿವಾನಂದಪ್ಪ, ಜಿ. ಬಸಂತ, ಶಿಕ್ಷಕ ವರ್ಗ ಭಾಗವಹಿಸಿದ್ದರು. ದತ್ತಿ ದಾನಿಗಳಿಗೆ ಸನ್ಮಾನ, ಮಕ್ಕಳಿಂದ ಭಾಷಣ, ಕವನ, ಹಾಡು ಏರ್ಪಡಿಸಲಾಗಿತ್ತು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಿ. ಜಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಪ್ರಕಾಶ್ ಹೆಚ್. ಕೆ ಸ್ವಾಗತಿಸಿ, ರೂಪಶ್ರೀ ನಿರೂಪಿಸಿ, ಅಶ್ವಿನಿ ಪಂಡಿತ್ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





