ಶೃಂಗೇರಿ ; ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹುಲಗಾರುಬೈಲು ಅರಣ್ಯದಲ್ಲಿ ಬಂದೂಕೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹುಲಗಾರುಬೈಲು ಅರಣ್ಯದ ನಡುವೆ ಒಂದು ನಾಡ ಬಂದೂಕು, 18 ಖಾಲಿ ಕಾಟ್ರೇಜ್ ಪತ್ತೆಯಾಗಿದೆ. ಬಂದೂಕನ್ನು ಕಾಡಿನಲ್ಲಿ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೃಂಗೇರಿ ಪೊಲೀಸರು ನಾಡ ಬಂದೂಕು ಸೇರಿದಂತೆ 18 ಖಾಲಿ ಕಾಟ್ರೇಜ್ ವಶಕ್ಕೆ ಪಡೆದಿದ್ದಾರೆ.

ನಕ್ಸಲರ ಶರಣಾಗತಿ ಬೆನ್ನಲ್ಲೇ ಕಾಡಿನಲ್ಲಿ ಬಂದೂಕು ಪತ್ತೆಯಾಗಿದೆ. ಕಳೆದ ಶನಿವಾರ ನಕ್ಸಲ್ ರವೀಂದ್ರ ಶಸ್ತ್ರ ರಹಿತವಾಗಿ ಶರಣಾಗತಿಯಾಗಿದ್ದ. ರವೀಂದ್ರ ಬಳಿ ಇದ್ದ ಶಸ್ತ್ರ ಇದೀಗ ಪತ್ತೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶರಣಾಗತಿ ಮುನ್ನ ರವೀಂದ್ರ ಕಾಡಿನಲ್ಲಿ ಎಸೆದಿರಬಹುದು ಎನ್ನಲಾಗಿದೆ.
ಎನ್ ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಈ ಹಿಂದೆ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಕಾಡಿನ ನಡುವೆ ಭೂಮಿಯೊಳಗೆ ಹೂತುಹಾಕಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಈ ವೇಳೆ ಎಕೆ56 ಸೇರಿದಂತೆ 6 ಬಂದೂಕು ಜೀವಂತ ಮದ್ದುಗುಂಡು ಪತ್ತೆಯಾಗಿತ್ತು.