ಹೊಸನಗರ ; ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐವರು ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆರಟೆ ಸೇತುವೆ ಸಮೀಪ ನಡೆದಿದೆ.
ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರು ಮತ್ತು ಮಾಸ್ತಿಕಟ್ಟೆಯಿಂದ ಕೊಡಚಾದ್ರಿ ಕಡೆ ಹೋಗುತ್ತಿದ್ದ ಮತ್ತೊಂದು ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ.
ಕುಂದಾಪುರ ಕಡೆ ಹೊರಟಿದ್ದ ಕಾರಿನಲ್ಲಿ ಅಲ್ಪಾಜ್, ಇರ್ಫಾನ್ ಇಬ್ಬರು ಇದ್ದು ಅಲ್ಫಾಜ್ ಗೆ ಹೊಟ್ಟೆಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಗಂಭೀರ ಗಾಯವಾಗಿದೆ. ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರ್ಫಾನ್ ಕೂಡ ಗಾಯಗೊಂಡಿದ್ದಾನೆ.
ಕೊಡಚಾದ್ರಿ ಕಡೆ ಹೊರಟಿದ್ದ ಕಾರಿನಲ್ಲಿ ಮಂಜುನಾಥ್, ಯಶ್, ಮೋಹನ್ ಸೇರಿದಂತೆ ಮೂವರು ಇದ್ದು ಮೋಹನ್ ಎಂಬುವವರ ತಲೆಗೆ ಪೆಟ್ಟಾಗಿದ್ದು, ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರ ಕೈಗಳಿಗೆ ಗಾಯಗಳಾಗಿವೆ.
ಇವರು ಬಳ್ಳಾರಿಯ ಕಂಪ್ಲಿ, ಕರಟಗಿ ಕಡೆಯವರಾಗಿದ್ದು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಳಿಕ ಕೊಡಚಾದ್ರಿಗೆ ಹೋಗುತ್ತಿದ್ದರು. ನಗರದಲ್ಲಿ ರಸ್ತೆ ಮಿಸ್ ಆಗಿ ಮಾಸ್ತಿಕಟ್ಟೆ ಹೋಗಿದ್ದರು. ಬಳಿಕ ವಾಪಸ್ ಬರುವ ವೇಳೆ ಈ ಅಪಘಾತವಾಗಿದೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.