HOSANAGARA ; ಕಳೆನಾಶಕ ಸೇವಿಸಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾ.ಪಂ. ವ್ಯಾಪ್ತಿಯ ಪುಣಜೆ ಗ್ರಾಮದ ಚಿಕ್ಕಮಣತಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಅನುದೀಪ್ ಜಿ (16) ಎಂದು ಗುರುತಿಸಲಾಗಿದೆ. ನ.15 ರಂದು ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಇಂದು ಮೃತಪಟ್ಟಿದ್ದಾನೆ.
‘ತನಗೆ ಓದು ತಲೆಗೆ ಹತ್ತುವುದಿಲ್ಲ. ಈ ಬಾರಿಯ ಎಸ್.ಎಸ್.ಎಲ್.ಸಿ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಲ್ಲಿ ವಿಷ ಸೇವಿಸಿರುವುದಾಗಿ’ ವಿಷ ಸೇವಿಸಿದ ಸಂದರ್ಭದಲ್ಲಿ ಅನುದೀಪ್ ಹೇಳಿರುವುದಾಗಿ ಮೃತನ ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.