THIRTHAHALLI ; ಪಟ್ಟಣ ಸಮೀಪದ ಯಡೇಹಳ್ಳಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತೀರ್ಥಹಳ್ಳಿ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷನನ್ನು ತಕ್ಷಣವೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ 112 ಪೊಲೀಸರಿಬ್ಬರು ಜೀವ ಉಳಿಸಿದ್ದಾರೆ.
ಏನಿದು ಘಟನೆ ?
ಮಂಗಳವಾರ ರಾತ್ರಿ ತೀರ್ಥಹಳ್ಳಿ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಹೊದಲ ರಮೇಶ್ ತನ್ನ ಕೆಲವು ಸ್ನೇಹಿತರಿಗೆ ಫೋನ್ ಮಾಡಿ ʼನಾನು ಸಾಯುತ್ತಿದ್ದೇನೆʼ ಎಂದು ಹೇಳಿ ಯಡೇಹಳ್ಳಿ ಕೆರೆಗೆ ಹಾರಿದ್ದಾನೆ ಎನ್ನಲಾಗಿದೆ. ಈ ವಿಚಾರ ತಿಳಿದು ಕೆರೆ ಸಮೀಪ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಾದ ಲೋಕೇಶ್ ಹಾಗೂ ರಾಮಪ್ಪನವರಿಗೆ ಕಾರೊಂದು ಅಂಗನವಾಡಿ ಬಳಿ ಅನುಮಾನಾಸ್ಪದವಾಗಿ ನಿಂತಿದ್ದು ಕಂಡು ಬಂದಿದೆ. ಕೆರೆ ಹತ್ತಿರ ಹೋಗಿ ನೋಡಿದಾಗ ಕೆರೆಯಲ್ಲಿ ತೇಲುತ್ತಿದ್ದ ಹೊದಲ ರಮೇಶ್ ಎಂಬಾತನನ್ನು ರಕ್ಷಿಸಿದ್ದಾರೆ.
ನಂತರ ಆತ್ಮಹತ್ಯೆಗೆ ಪ್ರಯತ್ನಿಸಿದ ಈತನನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹೊದಲ ರಮೇಶ್ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ.
ಸಮಯ ಪ್ರಜ್ಞೆಯಿಂದ ಕೆರೆಗೆ ಹಾರಿ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ ಹಾಗೂ ಲೋಕೇಶ್ ರವರ ಕೆಲಸಕ್ಕೆ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹಾಗೂ ಶಿವಮೊಗ್ಗ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿದ್ದಾರೆ.