ನೆಮ್ಮದಿ ಸಿಗುವ ತಾಣ ಎಂದರೆ ದೇವ ಮತ್ತು ಗುರು ಸನ್ನಿಧಿ

0 45


ಹೊಸನಗರ: ಬಡತನದಲ್ಲಿ ಎರಡು ವಿಧ ಧನಕನಕ ವಸ್ತುಗಳಿಲ್ಲದಿರುವ ಬಾಹ್ಯವಾದ ಬಡತನ ಒಂದಾದರೆ ಮತ್ತೊಂದು ಮನಸ್ಸಿನ ಬಡತನ. ವಾಸ್ತವವಾಗಿ ಮನಸ್ಸಿನ ಬಡತನವೇ ನಿಜವಾದ ಬಡತನ, ಅಂತಹ ಬಡತನ ನಿವಾರಣೆಗೆ ಇರುವ ಒಂದೇ ಸೂತ್ರ ಅದು ನೆಮ್ಮದಿ ಆ ನೆಮ್ಮದಿ ಸಿಗುವ ಸ್ಥಳ ಎಲ್ಲಿ ಎಂದರೆ ದೇವಾಲಯ, ಗುರು ಮಠ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.


ಇಲ್ಲಿನ ಮಹಾನಂದಿ ಗೋಲೋಕದ ಸುಂದರ ಗೋವರ್ಧನಗಿರಿಧಾರಿ ದೇವಾಲಯದ ಸನ್ನಿಧಿಯಲ್ಲಿ ಏರ್ಪಡಿಸಲಾಗಿದ್ದ 2 ದಿನಗಳ ಕೃಷ್ಣಾರ್ಪಣಂ ಕಾರ‍್ಯಕ್ರಮದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಇದು ಸತ್ಯ ಸಾದೃಷ್ಟ, ಹಾಗಿಲ್ಲ ಎಂದಾದರೆ ನೆಮ್ಮದಿಯನ್ನು ಹುಡುಕಿ ಜನ ದೇವಸ್ಥಾನಗಳ ಮುಂದೆ ನಿಂತಿರುತ್ತಿರಲಿಲ್ಲ, ನೆಮ್ಮದಿಯನ್ನು ಹುಡಕಿ ಹೋಗುವ ನಾವೂ ಅದು ಸದಾ ಇರುವಂತೆ ಪ್ರಾರ್ಥಿಸಿಕೊಳ್ಳಬೇಕು ಹಾಗೂ ಪದೇ ಪದೆ ನೆಮ್ಮದಿ ಸಿಗುವ ಸ್ಥಳಕ್ಕೆ ಹೋಗುತ್ತಿರಬೇಕು ಎಂದರು.

ವಿಶೇಷ ಎಂದರೆ ರಾಮಚಂದ್ರಾಪುರಮಠದ ಈ ಮಹಾನಂದಿ ಗೋಲೋಕದಲ್ಲಿ ಗೋವುಗಳು ಕೂಡ ನೆಮ್ಮದಿಯಿಂದ ಇವೆ. ಇಲ್ಲಿ ಬರುವ ಜನರು ಅತ್ತ ದೇವಾಲಯ ಇತ್ತ ನೆಮ್ಮದಿಯಲ್ಲಿ ವಿಹರಿಸುತ್ತಿರುವ ಗೋವುಗಳ ನೋಡಿ ತಮ್ಮ ಎಲ್ಲ ಕಷ್ಟನಷ್ಟಗಳನ್ನು ಮರೆತು ನೆಮ್ಮದಿಯ ಸಮಯವನ್ನು ಕಳೆಯುತ್ತಾರೆ. ಅಂತಹ ನೆಮ್ಮದಿ ಶಾಶ್ವತವಾಗಬೇಕಾದರೆ ನಮ್ಮ ಮನಸ್ಸಿನಲ್ಲಿರುವ ಬಡತನವನ್ನು ಮೊದಲು ಪರಿಹರಿಸಿಕೊಳ್ಳಬೇಕು ಎಂದರು.


ಈ ವೇಳೆ ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿಯವರು ವಿಷ್ಣು ಸಹಸ್ರನಾಮಕ್ಕೆ ಮಾಡಿರುವ ಭಾವನುವಾದದ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕ ಲೋಕಾರ್ಪಣೆಗೊಳಿಸಿದರು ಮತ್ತು ಗೋ ಬಂಧಮುಕ್ತ ಗೋಶಾಲೆ ಉದ್ಘಾಟನೆ ನಡೆಯಿತು.


ಇದಕ್ಕೂ ಮುನ್ನ ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ವಿಷ್ಣು ಸಹಸ್ರನಾಮದ ಮಹತ್ವ ಕುರಿತು ಮಾತನಾಡಿ, ಶ್ರೇಷ್ಟ ಮತ್ತು ಜೇಷ್ಠ ಧರ್ಮ ಎಂದರೆ ವಿಷ್ಣು ಸಹಸ್ರ ಪಠಣ, ವಿಷ್ಣು ಸಹಸ್ರನಾಮ ಎನ್ನುವುದು ಜೀವನವನ್ನು ಹೂವಿನಂತೆ ಸಾಗಿಸುವ ವಿಶಿಷ್ಟತೆಯುಳ್ಳ ನಾಮ ಎಂದರು.


ಯಾದಗಿರಿ ಮಾಳಗಿಮಠದ ಶ್ರೀ ಅಮೃತೇಶ್ವರ ಮಹಾರಾಜ್, ಗೋ ಬಂಧಮುಕ್ತ ಗೋಶಾಲೆಯ ಕೊಡುಗೆ ನೀಡಿದ ವಾಯುಕಾನ್ ಸಂಸ್ಥೆ ವ್ಯವಸ್ಥಾಪಕ ಮಹೇಂದ್ರ ರೆಡ್ಡಿ, ಗ್ಲೋಬಲ್ ವಿಷ್ಣು ಸಹಸ್ರನಾಮ ಸಂಸ್ಥೆಯ ವ್ಯವಸ್ಥಾಪಕಿ ಮಂಗಳಾ ಭಾಸ್ಕರ್, ಮಹಾನಂದಿ ಗೋಲೋಕದ ಗೌರವಾಧ್ಯಕ್ಷ ಜಿ.ವಿ. ಹೆಗಡೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್. ಎಸ್. ಹೆಗಡೆ, ನಾರಾಯಣ ಇಲ್ಲೂರ್, ಕುಸುಮಾ ಶ್ರೇಷ್ಠಿ, ನಾಗೇಶ್ ಹುಬ್ಬಳ್ಳಿ, ಡಾ. ಪ್ರಕಾಶ್ ಹೊಸಮನಿ, ನಿಸರಾಣಿ ರಾಮಕೃಷ್ಣ ಹೆಗಡೆ, ಶೇಷಗಿರಿ ಭಟ್, ಮಹಾನಂದಿ ಗೋಲೋಕದ ಅಧ್ಯಕ್ಷ ಡಾ. ಸೀತಾರಾಮ ಪ್ರಸಾದ್, ಕೆ.ಪಿ. ಎಡಪಾಡಿ, ರಾಘವೇಂದ್ರ ಮಧ್ಯಸ್ಥ ಇದ್ದರು.


ಬೆಳಗ್ಗೆ ಸಹಸ್ರಾಧಿಕ ಭಕ್ತರಿಂದ ವಿಷ್ಣು ಸಹಸ್ರನಾಮ ಪಾರಾಯಣ ಸಮರ್ಪಣೆ, ಪವಿತ್ರ ಶಿಲಾ ಸೋಪಾನಮಾಲೆಯ ಪೂಜೆ, ಛತ್ರ ಸಮರ್ಪಣೆ ಜರುಗಿತು.

Leave A Reply

Your email address will not be published.

error: Content is protected !!