ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹಾಲಪ್ಪ ನೇತೃತ್ವದಲ್ಲಿ ಹೊಸನಗರ ತಾಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ; ಕಾರಣವೇನು ಗೊತ್ತಾ ?

0 107


ಹೊಸನಗರ: ಕಂದಾಯ ಭೂಮಿಯಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಶಂಠಿ ಬೆಳೆಯನ್ನು ಒತ್ತುವರಿ ತೆರವು ನೆಪದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನೆಲಸಮಗೊಳಿಸಿರುವ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಇಲ್ಲಿನ ತಾಲೂಕು ಕಛೇರಿ ಆವರಣದಲ್ಲಿ ಶನಿವಾರ ಸಂಜೆ ದಿಢೀರ್ ಅಹೋರಾತ್ರಿ ಧರಣಿ ನಡೆಸಿದರು.


ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಚ್ಚಿಗೆಬೈಲು ಗ್ರಾಮದ ಸರ್ವೆ ನಂಬರ್ 31ರಲ್ಲಿ ದಲಿತ ಮಹಿಳೆಯೊಬ್ಬರು ತಮ್ಮ ಖಾತೆ ಜಮೀನು ಪಕ್ಕದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಶುಂಠಿ ಬೆಳೆದಿದ್ದರು. ಅಕ್ರಮ ಸಕ್ರಮೀಕರಣಕ್ಕೆ ಫಾರಂ ನಂ.57 ನಲ್ಲಿ ಅರ್ಜಿ ಸಹಾ ಸಲ್ಲಿಕೆಯಾಗಿತ್ತು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಬೇಲಿ ತೆರವು ಮಾಡಿದ್ದರು. ಶನಿವಾರ ಏಕಾಏಕಿ ಜಾಗಕ್ಕೆ ತೆರಳಿ ಭೂಮಿಯಲ್ಲಿ ಬೆಳೆದಿದ್ದು ಶುಂಠಿ ಬೆಳೆಯನ್ನು ಜೆಸಿಬಿ ಯಂತ್ರ ಬಳಸಿ ನೆಲಸಮ ಮಾಡಿದ್ದಾರೆ. ಇಂತಹ ಅಮಾನವೀಯ ಕೃತ್ಯ ಎಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕು. ಆಗಿರುವ ಲಕ್ಷಾಂತರ ರೂ. ನಷ್ಟವನ್ನು ಭರಿಸಬೇಕು ಎಂದು ಆಗ್ರಹಿಸಿದರು.


ಮಾಜಿ ಶಾಸಕ ಹಾಲಪ್ಪ ಹರತಾಳು ಮಾತನಾಡಿ, 3 ಎಕರೆಗಿಂತ ಕಡಿಮೆ ಒತ್ತುವರಿಯನ್ನು ತೆರವು ಮಾಡುವುದಿಲ್ಲ ಎಂದು ಸರಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಬಗರ್‌ಹುಕುಂ ಅರ್ಜಿ ವಿಲೇ ಮಾಡದೇ ಯಾವ ನಿಯಮದ ಪ್ರಕಾರ ಬೆಳೆ ನಾಶ ಮಾಡಲಾಗಿದೆ ಎನ್ನುವುದು ತಿಳಿಯಬೇಕಾಗಿದೆ. ಹೊಸ ಸರ್ಕಾರ ಬಂದೊಡನೇ ಇಂತಹ ಘಟನೆ ನಡೆಯುತ್ತಿರುವುದು ದುರದೃಷ್ಟಕರ. ಅದೆಷ್ಟೋ ರೈತರ ಒತ್ತುವರಿ ಇದ್ದಾಗ್ಯೂ ಕೆಲವರಿಗೆ ಸಂಬಂಧಪಟ್ಟದ್ದನ್ನು ಮಾತ್ರ ತೆರವು ಮಾಡುತ್ತಿರುವುದರ ಹಿಂದಿನ ಕಾರಣವೇನು ಅದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದರು.


ದಲಿತ ಮಹಿಳೆಗೆ ನ್ಯಾಯ ದೊರಕುವವರೆಗೂ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಮಾತನಾಡಿ, ಒತ್ತುವರಿ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ಬೆಳೆ ಹಾನಿ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಪ್ರತಿಭಟನೆಯಲ್ಲಿ ಸಂತ್ರಸ್ಥ ಕುಟುಂಬದ ರುಕ್ಮಿಣಿ, ಶಿವಮೊಗ್ಗ ರಾಜು, ಬಿಜೆಪಿ ಮುಖಂಡರಾದ ಉಮೇಶ ಕಂಚುಗಾರ್, ದೇವಾನಂದ, ಗಣಪತಿ ಬೆಳಗೋಡು, ಸುರೇಶ್ ಸ್ವಾಮಿರಾವ್, ಎಂ.ಎನ್.ಸುಧಾಕರ, ರಮೇಶ ಶೆಟ್ಟಿ, ಗುರುರಾಜ, ಮಂಜುನಾಥ್ ಹೆಚ್.ಎಸ್, ಅಭಿಲಾಷ್ ಮತ್ತಿತರರು ಇದ್ದರು.


ಸಂಧಾನ ಯಶಸ್ವಿ:

ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಶಾಸಕ ಹೆಚ್ ಹಾಲಪ್ಪನವರು ತಾಲ್ಲೂಕು ಕಛೇರಿಯ ಮುಂಭಾಗ ಧರಣಿ ನಡೆಸುತ್ತಿರುವ ಸುದ್ಧಿ ಕೇಳಿ ಸಾಗರ ಉಪ ವಿಭಾಗಾಧಿಕಾರಿಯಾದ ಪಲ್ಲವಿಯವರು ಆಗಮಿಸಿ ಸಂಧಾನ ನಡೆಸುತ್ತಿದ್ದು ತಾಲ್ಲೂಕು ಕಛೆರಿಯ ಅಧಿಕಾರಿಗಳಿಂದ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಪ್ರತಿಭಟನಗಾರರು ಬರೀ ಕ್ರಮ ಕೈಗೊಂಡರೆ ಸಾಲದು ಬೆಳೆ ನಷ್ಟ ಕೊಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಆದರೆ ಪ್ರಕರಣ ಸಂಧಾನ ಹಂತಕ್ಕೆ ತಲುಪಿದೆ.

Leave A Reply

Your email address will not be published.

error: Content is protected !!