ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ನಿಜವಾದ ಬದುಕು ; ಶ್ರೀ ರಂಭಾಪುರಿ ಜಗದ್ಗುರುಗಳು

0 67

ಎನ್.ಆರ್ ಪುರ : ಮನುಷ್ಯನ ಬದುಕು ಯಾಂತ್ರಿಕವಾಗಿದೆ. ಶಾಂತಿ ನೆಮ್ಮದಿ ಕಾಣದಂತೆ ಆಗಿದೆ. ಮಾತನಾಡಿದಂತೆ ಜೀವಿಸಲು ಬರೆದಿಟ್ಟಂತೆ ಬದುಕಲು ಸಾಧ್ಯವಾಗುತ್ತಿಲ್ಲ. ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ನಿಜವಾದ ಸಂತೃಪ್ತ ಬದುಕು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಶಿಕ್ಷಣ ಮತ್ತು ಸಂಸ್ಕಾರದ ಬದುಕು ಜೀವನ ಉನ್ನತಿಗೆ ಸಹಕಾರಿ. ಮನುಷ್ಯ ನೀರು ಶುದ್ಧ ಮಾಡುವುದನ್ನು ಕಲಿತ. ಗಾಳಿ ಶುದ್ಧ ಮಾಡುವುದನ್ನು ಕಲಿತ. ಆದರೆ ತನ್ನ ಶರೀರದ ಒಳಗಿರುವ ಕೊಳಕನ್ನು ಶುದ್ಧ ಮಾಡಿಕೊಳ್ಳಲು ಕಲಿಯಲಿಲ್ಲ. ಮನುಷ್ಯನಿಗೆ ಮನುಷ್ಯತ್ವ, ಮುಮುಕ್ಷತ್ವ ಮತ್ತು ದೊಡ್ಡವರ ಸಹವಾಸ ಪ್ರಾಪ್ತವಾಗಬೇಕಾದರೆ ಗುರುವೇ ಮೂಲನಾಗಿದ್ದಾನೆ. ನದಿ ಎಷ್ಟೇ ದೂರ ಹರಿದು ಹೋದರೂ ಮೂಲ ಸಂಬಂಧ ಕಳೆದುಕೊಳ್ಳದು. ಅದೇ ರೀತಿ ಮನುಷ್ಯ ಎಷ್ಟೇ ಬೆಳೆದರೂ ಮೂಲ ಸಂಬಂಧ ಮರೆಯಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಚಿಂತನಗಳು ಬದುಕಿನ ಭದ್ರತೆಗೆ ಅಡಿಪಾಯವಾಗಿದೆ. ಧಾರವಾಡದ ಭಾಷಾ ವಿಜ್ಞಾನಿ ಡಾ|| ಸಂಗಮೇಶ ಸವದತ್ತಿಮಠ ಮತ್ತು ಬೆಂಗಳೂರಿನ ಬಾಳಯ್ಯ ಇಂಡಿಮಠ ಅವರ ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಅಪಾರ ಸಾಧನೆ ಮಾಡಿದ್ದನ್ನು ಸ್ಮರಿಸಿ ಅವರಿಬ್ಬರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.


ಬೇರುಗಂಡಿ ಮಠದ ರೇಣುಕ ಮಹಾಂತ ಶ್ರೀಗಳು, ಸಂಗೊಳ್ಳಿ ಮಠದ ಗುರುಲಿಂಗ ಶ್ರೀಗಳು, ದಾನಯ್ಯ ದೇವರು ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ಪ್ರಾರಂಭದಲ್ಲಿ ಸ್ವಾಗತಿಸಿ ನಿರೂಪಣೆ ನಿರ್ವಹಿಸಿದರು.


ಪ್ರಾತಃಕಾಲದಲ್ಲಿ ಆರು ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಬಾಳಯ್ಯ ಇಂಡಿಮಠರು ಅನ್ನ ದಾಸೋಹ ಸೇವೆ ಸಲ್ಲಿಸಿದರು.

Leave A Reply

Your email address will not be published.

error: Content is protected !!