ಶ್ರೀ ರಾಮ ನಾಮ ಸ್ಮರಣೆ ವಿಶ್ವ ಶಾಂತಿ ಪ್ರೇರಕ ಶಕ್ತಿ ; ಹೊಂಬುಜ ಶ್ರೀಗಳು

0 261

ರಿಪ್ಪನ್‌ಪೇಟೆ : ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸೋಮವಾರದಂದು ಅಯೋಧ್ಯೆಯಲ್ಲಿ ನೂತನ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಿದ ನಿಮಿತ್ತ ಹೊಂಬುಜ ಜೈನ ಮಠದಲ್ಲಿ ಸಂಜೆ ದೀಪೋತ್ಸವ ನೆರವೇರಿಸಿದರು.

ಗುರುವಿಗೆ ಶಿಷ್ಯನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಸತಿಗೆ ತಕ್ಕ ಪತಿಯಾಗಿ ಅಯೋಧ್ಯೆಯ ಎಲ್ಲಾ ಜನರ ಪ್ರೀತಿ ಪಾತ್ರರಾಗಿ ಸಭ್ಯ ಸಮಾಜದ ಮರ್ಯಾದಾ ಪುರುಷೋತ್ತಮನಾಗಿ ಬಾಳಿದವ “ಶ್ರೀರಾಮ”. ಇಂದಿಗೂ ಎಂದೆಂದಿಗೂ ಶ್ರೀರಾಮ ಆದರ್ಶ ಪುರುಷ. ಜೀವನದ ಸಂಘರ್ಷದ ಏಳು-ಬೀಳುಗಳಲ್ಲಿ ಸ್ವಭಾವದಲ್ಲಿ ಕಿಂಚಿತ್ತು ಎದೆಗುಂದದೆ ಎಲ್ಲವನ್ನು ಗೆದ್ದಂತ ಮಹಾವೀರ.

ರಾಮಾಯಣದ ರಘುರಾಮ “ಕ್ಷೇಮಂ ಸರ್ವ ಪ್ರಜಾನಾಂ” ಪರಿಪಾಲಕನು, ಜೈನ ಪುರಾಣದ “ಪದ್ಮ” ನೇ ಬಲಭದ್ರನಾಗಿ ಕೇವಲಿ (ಅರಿಹಂತ) ಯಾಗಿ ಮಾಂಗಿ-ತುಂಗಿ (ಮಹಾರಾಷ್ಟ) ದಲ್ಲಿ ಮುಕ್ತಿ ಹೊಂದಿದ ಸಿದ್ಧಪುರುಷನೇ ಶ್ರೀರಾಮ.

ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಸ್ಥಾನದಲ್ಲಿ ಸುಂದರವಾದ ಮಂದಿರವನ್ನು ನಿರ್ಮಿಸಿ ಪ್ರತಿಮೆಯನ್ನು ಸ್ಥಾಪಿಸಿ, ಈ ಭೂಮಿ ಎಂದೆಂದಿಗೂ ಪುಣ್ಯಭೂಮಿ. ಶಾಶ್ವತ ದೇವ ಭೂಮಿ. ಜನ-ಮಾನಸದಲ್ಲಿ ಶ್ರೀರಾಮನ ನಾಮ ಮತ್ತೊಮ್ಮೆ ರಾರಾಜಿಸಿದೆ ಎಂದರು.

ವಿಶೇಷ ಪೂಜೆ, ಪ್ರಾರ್ಥನೆಯನ್ನು ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸಮರ್ಪಿಸಲಾಯಿತು. ಪ್ರಾಚೀನ ಭಾರತೀಯ ಧರ್ಮ ಪರಂಪರೆಯನ್ನು ವಿಶ್ವದೆಲ್ಲೆಡೆ ಪ್ರಸರಿಸಿದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ, ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಸರ್ವ ಸದಸ್ಯರ ಕಾರ್ಯಕ್ಷಮತೆ ಅಭಿನಂದನೀಯ.

ಶ್ರೀರಾಮ ಆದರ್ಶ ಮಾನ್ಯ ಆಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಕ ಶ್ರೀ ಅನಿಲ್ ಜೈನ್ ಅವರು ರಚಿಸಿದ ಶ್ರೀರಾಮನ ಕಲಾಕೃತಿಗೆ ದೀಪ ಹಚ್ಚಿ ಸಂಭ್ರಮಿಸಲಾಯಿತು.

Leave A Reply

Your email address will not be published.

error: Content is protected !!