ಸರ್ಕಾರದ ಯೋಜನೆಗಳ ಯಶಸ್ಸು ಅಧಿಕಾರಿ ವರ್ಗದ ಕಾರ್ಯ ವೈಖರಿಯನ್ನು ಅವಲಂಬಿಸಿದೆ ; ಮಧು ಬಂಗಾರಪ್ಪ

0 34

ಹೊಸನಗರ : ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಜನಪ್ರತಿನಿಧಿಗಳಲು ಹಾಗೂ ಅಧಿಕಾರಿ ವರ್ಗದ ನಡುವೆ ಸಂವಹನದ ಕೊರತೆ ಆದರೆ ಯೋಜನೆ ಹಳ್ಳ ಹಿಡಿಯುತ್ತದೆ. ಜನಪರ ಕಾಳಜಿಯಿಂದ ಕೆಲಸ ಮಾಡಿಎಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಇತ್ತೀಚೆಗೆ ಭೂ ಒತ್ತುವರಿ ತೆರವು ಪ್ರಕರಣಗಳ್ಲಿ ಅಧಿಕಾರಿಗಳು ಬೆಳೆಯನ್ನು ನಾಶ ಮಾಡಿರುವ ಘಟನೆಗಳು ಗಮನಕ್ಕೆ ಬಂದಿದೆ. ತೆರವು ಕಾರ್ಯ ನಡೆಸುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆ ಮರೆತು ಕೆಲಸ ಮಾಡುತ್ತಿರುವುದು ದುರದೃಷ್ಠಕರ. ರೈತರ ಕಷ್ಟದ ಕುರಿತು ಅರಿವು ಇರಬೇಕು ಇಲ್ಲಿನ ಜಾಗ ಒತ್ತುವರಿ ಪ್ರಕರಣಗಳಲ್ಲಿ ಜಾಗವನ್ನು ಇಲಾಖೆ ಮರಳಿ ಪಡೆಯಲು ಟ್ರಂಚ್ ತೆಗೆಯಬಹುದು. ಬೇಲಿ ನಿರ್ಮಾಣ ಮಾಡಬಹುದು. ಆದರೆ ರೈತ ಬೆಳೆದ ಬೆಳೆಗಳನ್ನು ನಾಶ ಮಾಡಲು ಅಧಿಕಾರಿಗಳಿಗೆ ಅಧಿಕಾರವಿಲ್ಲ. ನ್ಯಾಯಾಲಯ ಸಹಾ ಇಂತಹ ಒಂದು ಪ್ರಕರಣದಲ್ಲಿ ಅರಣ್ಯ ಇಲಾಖೆಗೆ ನೋಟೀಸ್ ಜಾರಿ ಮಾಡಿದೆ. ರೈತನಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎನ್ನುವುದನ್ನು ಮರೆಯಬಾರದು ಎಂದರು.


ತಾಲೂಕಿನ ಕೆಲ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ದೊರೆಯದಿರುವುದು ಗಂಭೀರ ವಿಷಯ. ಪುಸ್ತಕಗಳ ಕೊರತೆ ಇಲ್ಲ. ಮಕ್ಕಳಿಗೆ ದೊರಕಿಸುವ ವ್ಯವಸ್ಥೆಯನ್ನು ಮಾಡಿ ಎಂದ ಅವರು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯದ ಪ್ರಗತಿ ಕುಂಠಿತವಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.


ಉತ್ತರಿಸಲು ತಡವರಿಸಿದ ತಹಸೀಲ್ದಾರ್:
ಬಗರ್‌ಹುಕುಂ ಹಾಗೂ 94ಸಿ ಅರ್ಜಿಗಳ ವಿಲೇ ಕುರಿತು ಮಾಹಿತಿ ಪಡೆದ ಸಚಿವರು ಸಲ್ಲಿಕೆಯಾದ 16 ಸಾವಿರ 94ಸಿ ಅರ್ಜಿಗಳ ಪೈಕಿ ಬಹುತೇಕ ಅರ್ಜಿಗಳನ್ನು ವಜಾಗೊಳಿಸಿದ್ದೀರಿ. ಇನ್ನುಳಿದ 300 ಅರ್ಜಿಗಳನ್ನೂ ವಜಾಗೊಳಿಸಿ ಬಿಡಿ. ಇದೇನಾ ಸಾಧನೆ ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಸೂಕ್ತ ಸಮಜಾಯಿಸಿ ಕೊಡಲು ತಹಸೀಲ್ದಾರ್ ತಡಬಡಿಸಿದಾಗ, ಮಧ್ಯ ಪ್ರವೇಶಿಸಿದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಅರಣ್ಯ ಭೂಮಿಗೆ ಸಂಬಂಧಿಸಿದ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದರು.


ಬೆಳಕು ಕೊಟ್ಟ ಹೊಸನಗರ ಜನತೆ ಇಂದು ಕತ್ತಲೆಯಲ್ಲಿ ಕೂರುವಂತಾಗಿದೆ. ಪರಿವರ್ತಕ ಸುಟ್ಟು ವಾರವಾದರೂ, ದುರಸ್ತಿ ಆಗುತ್ತಿಲ್ಲ ಎನ್ನುವ ದೂರು ಬಂದಿದೆ. ಎಂದು ಮೆಸ್ಕಾಂ ಎಇಇ ಅವರನ್ನು ಶಾಸಕ ಗೋಪಾಲಕೃಷ್ಣ ತರಾಟೆಗೆ ತೆಗೆದುಕೊಂಡರು. ಹೊಸನಗರಕ್ಕೆ 110/11ಕೆವಿ ಸ್ಥಾವರ ಇಲ್ಲದಿರುವುದು ಹಾಗೂ ಪರಿವರ್ತಕಗಳನ್ನು ಸಾಗರದಿಂದ ಸಾಗಿಸಿ ತರಬೇಕಾಗಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದರು.


ಜೆಜೆಎಂ ಯೋಜನೆಯಡಿ ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವಂತೆ ಇಲಾಖೆಯ ಇಂಜಿನಿಯರ್‌ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆ ನೀಡಿದರು. ಎಲೆಚುಕ್ಕಿ ರೋಗ ಹೆಚ್ಚು ಕಂಡು ಬಂದಿರುವ ತಾಲೂಕಿನ ನಿಟ್ಟೂರು ಹಾಗೂ ಸಾಗರ, ತುಮರಿಯಲ್ಲಿ ರೈತರಿಗೆ ಮಾಹಿತಿ ಕಾರ‍್ಯಾಗಾರ ಏರ್ಪಡಿಸುವಂತೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಇಓ ನರೇಂದ್ರಕುಮಾರ್, ಆಡಳಿತ ಅಧಿಕಾರಿ ಜಯಲಕ್ಷ್ಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಮತ್ತಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!