ಹೊಸನಗರ: ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಿದಲ್ಲಿ ಮಾತ್ರ ಆ ಯೋಜನೆಗಳ ಮೂಲ ಆಶಯ ಈಡೇರಲು ಸಾಧ್ಯ. ಸರ್ಕಾರದ ಹಲವು ಬಗೆಯ ಯೋಜನೆಗಳು ಈ ದೇಶದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದರಿಂದ ಈ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ ಹೇಳಿದರು.
ಪಟ್ಟಣಕ್ಕೆ ಸಮೀಪದ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಸರಕಾರದ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಕೆಲವೊಮ್ಮೆ ಗೊಂದಲಗಳಾಗುತ್ತವೆ. ನೈಜವಾಗಿ ಅಗತ್ಯ ಇರುವವರಿಗಿಂತಲೂ ರಾಜಕೀಯ ಪ್ರಭಾವ ಹೊಂದಿರುವವರಿಗೆ ಯೋಜನೆಯ ಲಾಭ ಸಿಗುತ್ತದೆ. ಆದರೆ ಪಕ್ಷಾತೀತವಾಗಿ ಆಯ್ಕೆಗೊಂಡ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆ ಮಾಡುವಾಗ ಇಂತಹ ಲೋಪಗಳು ಆಗುವುದು ಕಡಿಮೆ. ತಮ್ಮ ಸುತ್ತಮುತ್ತಲ ನಿವಾಸಿಗಳ ಸಂಪೂರ್ಣ ಅರಿವು ಇರುವ ಕಾರಣಕ್ಕೆ ಅರ್ಹರಿಗೆ ಮೊದಲ ಪ್ರಾಧಾನ್ಯತೆ ನೀಡಲಾಗುತ್ತದೆ. ಈ ಕಾರಣಕ್ಕೆ ಪಂಚಾಯತ್‌ರಾಜ್ ವ್ಯವಸ್ಥೆ ಬಡವರ ಧ್ವನಿಯಾಗಿ ಕೆಲಸ ಮಾಡಬಲ್ಲದು ಎಂದರು.
ಮೇಲಿನಬೆಸಿಗೆ ಸೇರಿದಂತೆ ತಾಲೂಕಿನ ಹಲವು ಪಂಚಾಯಿತಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿವೆ. ಉತ್ತಮ ಕಾರ‍್ಯ ವೈಖರಿ ಇನ್ನಿತರ ಪಂಚಾಯಿತಿಗಳಿಗೆ ಮಾದರಿಯಾಗಬೇಕು. ಗ್ರಾಮೀಣ ಜನತೆಗೆ ನಗುಮುಖದ ಸೇವೆ ದೊರೆಯುವಂತಾಗಬೇಕು ಎಂದು ಆಶಿಸಿದರು.
ಹಿಂದೆ ಒಂದು ಸೇರು ಅಕ್ಕಿ ದುಡಿಯುವುದೇ ಸಾಹಸದ ಕೆಲಸವಾಗಿತ್ತು. ಹೊಟ್ಟೆ ತುಂಬಿದರೆ ಸಾಕು ಎನ್ನುವ ಸ್ಥಿತಿ ಇತ್ತು. ಇಂದು ದೇಶದ ಆರ್ಥಿಕ ಪರಿಸ್ಥಿತಿ ವಿಶ್ವಮಟ್ಟದಲ್ಲಿ ಗುರುತಿಸುವಷ್ಟರ ಮಟ್ಟಿಗೆ ಬೆಳೆದಿರುವುದು ಹೆಮ್ಮೆಯ ವಿಷಯ. ಆಡಳಿತವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರಕಾರ ಹೆಚ್ಚಿನ ಮಹತ್ವ ನೀಡಿದೆ ಎಂದರು.
ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಾಗರಾಜ್‌ರವರು ಮಾತನಾಡಿ, ಈ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಿಸಲು ಇಂದಿನ ಹಾಗೂ ಹಿಂದನ ಅಧ್ಯಕ್ಷ ಸದಸ್ಯರ ಪಾತ್ರ ಪ್ರಮುಖವಾಗಿದ್ದು ಅವರೆಲ್ಲರ ಸಹಕಾರದಿಂದ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ನೂತನ ಕಟ್ಟಡ ನಿರ್ಮಿಸಲು ಸಹಾಯಕವಾಗಿದ್ದು ಮುಂದಿನ ದಿನದಲ್ಲಿ ಮೇಲಿನಬೆಸಿಗೆ ಗ್ರಾಮ ಪಂಚಾಯತಿಯನ್ನು ಇನ್ನೂ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ಅಭಿಲಾಷೆ ಹೊಂದಿದ್ದೇವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ನಾಗರಾಜ್ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷರು, ಸಿಬ್ಬಂದಿಗಳಿಗೆ ಸನ್ಮಾನ ಕಾರ‍್ಯಕ್ರಮ ನಡೆಯಿತು.
ಗ್ರಾಪಂ ಸದಸ್ಯರಾದ ಟಿ.ಎಂ.ರಾಜೇಶಮೂರ್ತಿ, ಲಕ್ಷ್ಮಣ ಗೌಡ, ಶ್ರೀನಿವಾಸ, ಚಂದ್ರಕಲಾ, ಧರ್ಮಪ್ಪ, ಶಾಂತಾ, ಲಕ್ಷ್ಮಿ, ಪೂರ್ಣಿಮಾ ಪ್ರಮುಖರಾದ ನಾಗರಾಜಗೌಡ, ಶುಭಕರ, ಪ್ರಹ್ಲಾದ, ಗೋಪಿ, ಗ್ರಾಮ ಪಂಚಾಯತಿ ಪಿಡಿಓ ಜಾನ್ ಡಿಸೋಜ, ಲೆಕ್ಕ ಸಹಾಯಕಿ ಶಮೀರಾಬಾನು, ಚಂದ್ರ ಆಚಾರ್ಯ, ಮಹೇಶ್, ಭಾವನಿ, ಆನಂದ, ಎಸ್.ಪಿ ರಾಮಪ್ಪ, ಮತ್ತಿತರರು ಹಾಜರಿದ್ದರು.