– ಕ್ರಿಕೆಟ್, ವಾಲಿಬಾಲ್ ಆಡಿಸಿ ಜನರ ಪ್ರೀತಿ ಮಾಡಲು ಶಾಸಕರಾಗಬೇಕೆ ? ಗ್ರಾಮದ ಅಭಿವೃದ್ಧಿ ಬೇಡವೇ ?
ರಿಪ್ಪನ್‌ಪೇಟೆ: ಶಾಸಕರಾದವರಿಗೆ ಗ್ರಾಮೀಣ ಜನರ ಸಮಸ್ಯೆಯ ಅರಿವಿರಬೇಕು ಜೊತೆಯಲ್ಲಿ ಅಭಿವೃದ್ದಿಗಾಗಿ ಸರ್ಕಾರದ ಅನುದಾನವನ್ನು ತರುವ ಎದೆಗಾರಿಕೆ ಇರಬೇಕು. ಅದು ಬಿಟ್ಟು ಕ್ರಿಕೆಟ್, ವಾಲಿಬಾಲ್ ಆಡಿಸಿ ಜನರ ಪ್ರೀತಿ ಮಾಡಲು ಶಾಸಕನಾಗಬೇಕಾ ? ಮದುವೆ ಮನೆಯಲ್ಲಿ ಕನ್ನಡಕ ಹಾಕಿಕೊಂಡು ಊಟ ಮಾಡಿದ್ದೀಯಾ ಎಂದು ಕೇಳಿದಾಕ್ಷಣ ಎಂ.ಎಲ್.ಎ. ಆಗುವುದಿಲ್ಲ ಎಂದು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಾರ್ವಜನಿಕ ಸಭೆಯಲ್ಲಿ ಹೆಸರು ಹೇಳದೆ ಪರೋಕ್ಷವಾಗಿ ಬೇಳೂರು ಗೋಪಾಲಕೃಷ್ಣರನ್ನು ಟೀಕಿಸಿದರು.
ರಿಪ್ಪನ್‌ಪೇಟೆಯ ವ್ಯಾಪ್ತಿಯಲ್ಲಿ ಬರುವ ಸಾಗರ ತೀರ್ಥಹಳ್ಳಿ ಮಾರ್ಗದ ಅಂದಾಸುರ ಬಳಿಯಲ್ಲಿನ ಶಿಥಿಲಗೊಂಡ ಸಂಪರ್ಕ ಸೇತುವೆಗೆ 2.40 ಕೋಟಿ ವೆಚ್ಚದ ಸಂಪರ್ಕ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಚಂದಾಳದಿಂಬ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಸಾರ್ವಜನಿಕ ಸಮುದಾಯ ಭವನ ನಿರ್ಮಾಣ ಕಾಮಗಾರಿ ವೀಕ್ಷಣೆ ಮತ್ತು ಗವಟೂರು ಗ್ರಾಮದ ಸಂಪರ್ಕದ ಕಾಂಕ್ರೀಟ್ ರಸ್ತೆ ಕಾಮಗಾರಿ ಉದ್ಘಾಟನೆ ಬರುವೆ ಶಬರೀಶ ನಗರದ ಸಂಪರ್ಕ ರಸ್ತೆಗೆ 35 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 888 ಸಂಪರ್ಕ ರಸ್ತೆಗಳ ಅಭಿವೃದ್ದಿ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಹೆಚ್ಚು ಆಧ್ಯತೆ ನೀಡುವ ಮೂಲಕ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಸೈಕಲ್ ನೀಡುವ ಮೂಲಕ ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು ಅದರನ್ವಯ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಲೇಜ್ ಅಭಿವೃದ್ದಿಗೆ 19 ಕೋಟಿ ರೂ. ವೆಚ್ಚ ಮಾಡಿ ಕಾಲೇಜ್ ಕಟ್ಟಡ ನಿರ್ಮಿಸಲಾಗುತ್ತಿರುವುದಾಗಿ ವಿವರಿಸಿ ಇದು ಶಾಸಕರು ಮಾಡುವ ಕೆಲಸ ಎಂದು ಹೇಳಿ ಈಗಾಗಲೇ ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿ ಒಂದು ಕಿ.ಮೀ ರಸ್ತೆ ಡಬಲ್ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುತ್ತಿದ್ದು ಅತಿ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿ, ಮುಂದಿನ ಎರಡು ವರ್ಷದಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾ ಮೇಲ್ದರ್ಜೆಗೆ ಏರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಮೆಣಸೆ ಅನಂದ್, ನಾಗಾರ್ಜುನಸ್ವಾಮಿ, ರಾಮಚಂದ್ರ ಹರತಾಳು, ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸುಧೀಂದ್ರ ಪೂಜಾರಿ, ವಿನೋಧ ಇನ್ನಿತರ ಗ್ರಾಮ ಪಂಚಾಯ್ತಿ ಸದಸ್ಯರು ಪಕ್ಷದ ಮುಖಂಡರು ಹಾಜರಿದ್ದರು.