ಹೊಂಬುಜ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸುಜ್ಞಾನ, ಸಮೃದ್ಧಿ ಕರುಣಿಸಲೆಂಬ ಪ್ರಾರ್ಥನೆ

0 69

ರಿಪ್ಪನ್‌ಪೇಟೆ: ಶ್ರಾವಣ ಮಾಸದ ಸಂಪತ್ ಶುಕ್ರವಾರಗಳ ಪ್ರಥಮ ದಿನದಂದು ಭಕ್ತಿ, ಶ್ರದ್ಧೆಯಿಂದ ಭಕ್ತವೃಂದದವರು ಅತಿಶಯ ಶ್ರೀಕ್ಷೇತ್ರ ಹೊಂಬುಜದ ವಿಶ್ವವಂದ್ಯ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪ್ರಾರ್ಥಿಸಿದರು.

ಪ್ರಾತಃಕಾಲ ಶ್ರೀ ಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ, ಶ್ರೀಕ್ಷೇತ್ರಪಾಲ ಸನ್ನಿಧಿಯಲ್ಲಿ ನಿತ್ಯ ಜಲಾಭಿಷೇಕ, ಅಷ್ಟವಿದಾರ್ಚನೆ ಪೂಜೆಯನ್ನು ಶ್ರೀಕ್ಷೇತ್ರ ಹೊಂಬುಜ ಪೀಠಾಧಿಕಾರಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವ, ಮಾರ್ಗದರ್ಶನದಲ್ಲಿ ವಿಶೇಷ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಪೂಜೆಗಳು ನೆರವೇರಿದವು.
ನಂತರ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು “ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ, ಸಮರ್ಪಿಸಿದ ಕಾಣಿಕೆಗಳಿಂದ ಶ್ರೀ ಪದ್ಮಾವತಿ ದೇವಿ ಪ್ರಸನ್ನಳಾಗುವಳೆಂಬ ಅಚಲ ನಂಬಿಕೆಯಿದೆ. ಸರ್ವರಿಗೂ ಸುಜ್ಞಾನ, ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸುತ್ತೇವೆ” ಎಂದು ಪೂಜೆಯಲ್ಲಿ ಪಾಲ್ಗೊಂಡ ಸರ್ವರನ್ನೂ ಆಶೀರ್ವದಿಸಿದರು.


ಇದೇ ಸಂದರ್ಭದಲ್ಲಿ ಶ್ರಾವಣ ಮಾಸದಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧಕರೆಲ್ಲರೂ ಭಕ್ತಿ, ಶ್ರದ್ಧೆಯ ಕಾಣಿಕೆಗಳನ್ನು ಸಮರ್ಪಿಸಿ, ಉತ್ತಮ ಬೆಳೆ, ಮಳೆಗಾಗಿ ಪ್ರಾರ್ಥಿಸಿದರು. ಪರಮಪೂಜ್ಯ ಸ್ವಸ್ತಿಶ್ರೀ ಅಭೀಷ್ಠವರಪ್ರಸಾದದಾಯಿನಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ 108 ವಿವಿಧ ಸಿಹಿನೈವೇದ್ಯ ಸಮರ್ಪಿಸಿ, ಸರ್ವಾಲಂಕಾರ ಮಹಾಪೂಜೆಯಲ್ಲಿ ಆಗಮಿಸಿದ ಶ್ರಾವಕ-ಶ್ರಾವಿಕೆಯರು ಊರ ಪರಊರ ಭಕ್ತರು “ಜಯಜಯ ಶ್ರೀ ಪದ್ಮಾವತಿ ದೇವಿ, ಕಾಪಾಡು ಕಾಪಾಡು ಶ್ರೀ ಮಾತಾ ದೇವಿ” ಎಂಬ ಜಿನನಾಮಗಳನ್ನು ಪಠಿಸಿದರು.

ಸಾಂಗ್ಲಿ, ಕೊಲ್ಲಾಪುರ, ರಾಜ್ಯದ ಹಾಗೂ ಉತ್ತರ ಭಾರತದ ಜೈನ ಧರ್ಮಿಯರು, ಊರ ಪರ ಊರ ಭಕ್ತರು ಆಗಮಿಸಿದ್ದು ಭಕ್ತಾದಿಗಳಿಗೆ ಅಭೀಷ್ಠ ಪ್ರಸಾಧ ಭವನದಲ್ಲಿ ಸೂಕ್ತ ಊಟೋಪಚಾರ ಮತ್ತು ನೂತನ ಯಾತ್ರಿ ನಿವಾಸದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.

Leave A Reply

Your email address will not be published.

error: Content is protected !!