513 ವಿದ್ಯಾರ್ಥಿಗಳಿರುವ ಶಾಲೆಗೆ ದೈಹಿಕ, ಇಂಗ್ಲಿಷ್, ಹಿಂದಿ ಶಿಕ್ಷಕರೇ ಇಲ್ಲ !! ಶಿಕ್ಷಣ ಸಚಿವರ ತವರು ಜಿಲ್ಲೆಯ ಪರಿಸ್ಥಿತಿ ಇದು….

0 66

– ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೆ ಒಬ್ಬ ಒಬ್ಬರೇ ಶಿಕ್ಷಕರು !
– ಶಿವಮೊಗ್ಗ ಜಿಲ್ಲೆಯ ಅತಿ ದೊಡ್ಡ ಸರ್ಕಾರಿ ಪ್ರೌಢಶಾಲೆಯ ದುಸ್ಥಿತಿ !!
– ಕಣ್ಮುಚ್ಚಿ ಕುಳಿತಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು !!!

ರಿಪ್ಪನ್‌ಪೇಟೆ: ಪಟ್ಟಣದ ಸಾಗರ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಯಾಗಿದೆ.
ಈ ಶಾಲೆಯಲ್ಲಿ ದೈಹಿಕ, ಇಂಗ್ಲಿಷ್ ವಿಷಯಕ್ಕೆ ಖಾಯಂ ಶಿಕ್ಷಕರಿಲ್ಲದೆ ಶಾಲೆ ಸೊರಗುತಿದೆ.


ಹೌದು, 513 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಸರ್ಕಾರಿ ಪ್ರೌಢಶಾಲೆಯಲ್ಲಿ 10 ವಿಭಾಗಗಳಿದ್ದು 17 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದೈಹಿಕ ಶಿಕ್ಷಣಕ್ಕೆ ಖಾಯಂ ಶಿಕ್ಷಕರಿಲ್ಲ, ದೈಹಿಕ ಶಿಕ್ಷಣಕ್ಕೆ ಹೆಚ್ಚುವರಿಯಾಗಿ ಒಬ್ಬರು ಶಿಕ್ಷಕನ ನೇಮಕ ಮಾಡಿದ್ದು, ಶಾಲೆಗೆ ಬಂದರೆ ಪುಣ್ಯ 513 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಇಂಗ್ಲಿಷ್ ಹಾಗೂ ಹಿಂದಿ ವಿಷಯಕ್ಕೆ ಒಬ್ಬ ಒಬ್ಬರೇ ಶಿಕ್ಷಕರಿದ್ದಾರೆ.


ಕಳೆದ ಒಂದು ವರ್ಷದಿಂದ ಈ ಸರ್ಕಾರಿ ಶಾಲೆಯಲ್ಲಿ ಖಾಯಂ ಆಗಿ ದೈಹಿಕ ಶಿಕ್ಷಕರು, ಇಂಗ್ಲಿಷ್, ಹಿಂದಿ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಇರುವ ಒಬ್ಬ ಇಂಗ್ಲಿಷ್ ಶಿಕ್ಷಕರು 10 ವಿಭಾಗಗಳಿಗೆ ಪಾಠ ಕಲಿಸಲು ಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.


ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ರಿಪ್ಪನ್‌ಪೇಟೆ ಹೆಸರನ್ನು ಬೆಳಗಿಸಿದ ಕೀರ್ತಿ ಈ ಶಾಲೆಗೆ ಇದೆ. ಆದರೆ ಇಂದು ಹೆಸರು ಬೆಳಗಿಸಿದ ಶಾಲೆಗೆ ಹಾಗೂ ಮಕ್ಕಳಿಗೆ ಶಿಕ್ಷಕರೇ ಇಲ್ಲದಿರುವುದು ದುರಂತವೇ ಸರಿ.
ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಪ್ರವಚನ ನಡೆಯದೆ ವಿದ್ಯಾರ್ಥಿಗಳ ಜೀವನಕ್ಕೆ ಕಂಟಕ ಪ್ರಾಯವಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://fb.watch/mJNVv2xnhe/?mibextid=NnVzG8

ಶಿಕ್ಷಕರ ಕೊರತೆಯ ಬಗ್ಗೆ ಎಸ್.ಡಿ.ಎಂ.ಸಿ, ಶಾಲಾ ಪೋಷಕರ ಸಮಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಹಲವು ಬಾರಿ ಮನವಿ ಮಾಡಿ ಶಿಕ್ಷಕರ ಕೊರತೆ ನೀಗಿಸುವಂತೆ ಮನವಿ ಮಾಡಿದ್ದರು ಸಹ ಏನು ಪ್ರಯೋಜನವಾಗಿಲ್ಲ.
ವ್ಯಾಸಂಗದಲ್ಲಿ ಓದುವ ಮಕ್ಕಳು ಓದಿನಲ್ಲಿ ಗಮನಕೊಟ್ಟರೆ ಕ್ರೀಡೆಯಲ್ಲಿ ಇರುವ ಮಕ್ಕಳ ಭವಿಷ್ಯವೇನು? ಎಂಬುದು ಪೋಷಕರ ಪ್ರಶ್ನೆಯಾಗಿದೆ.


ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪಡೆದ ಶಾಲೆಯಲ್ಲಿ ದೈಹಿಕ ಶಿಕ್ಷಕರೇ ಇಲ್ಲ :

ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡ ಶಾಲೆಗೆ ಈಗ ಶಿಕ್ಷಕರ ಕೊರತೆ ಎದುರಿಸುತ್ತಿರುವ ಕುರಿತು ಶಾಲಾ ಎಸ್.ಡಿ.ಎಂ.ಸಿ, ಪೋಷಕರ ಸಮಿತಿ ಸಂಬಂಧಪಟ್ಟ ಶಿಕ್ಷಣ ಇಲಾಖೆ ಹಾಗೂ ಶಾಸಕರು ತಕ್ಷಣ ಗಮನಹರಿಸಿ ಶಿಕ್ಷಕರನ್ನ ನಿಯೋಜಿಸದಿದ್ದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್‌.ಡಿ.ಎಂ.ಸಿ.ಯೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಶಾಂತ್, ಹನೀಫ್ ಟ್ರ್ಯಾಕ್ಸ್, ಚಂದ್ರು ಬಸವಾಪುರ, ಮಧುರಾ ಎಚ್ಚರಿಸಿದ್ದಾರೆ.

Leave A Reply

Your email address will not be published.

error: Content is protected !!