ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆಯ ಗಾಳಿ ; ಗೀತಾ ಶಿವರಾಜ್‌ಕುಮಾರ್

0 184

ಶಿಕಾರಿಪುರ: ‘ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಪಕ್ಷದತ್ತ ಜನರು ಒಲವು ತೋರುತ್ತಿದ್ದಾರೆ. ಆದ್ದರಿಂದ, ಈ ಭಾರಿಯ ಚುನಾವಣೆಯಲ್ಲಿ ನನ್ನ ಗೆಲವು ನಿಶ್ಚಿತ’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಭರವಸೆ ವ್ಯಕ್ತಪಡಿಸಿದರು‌.

ಶಿಕಾರಿಪುರ ತಾಲ್ಲೂಕಿನ ತೋಗರ್ಸಿ, ಹರಗಿ, ಚಿಕ್ಕ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಗರ್ಸಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬದ ಮಹಿಳೆಯರು, ಅಶಕ್ತ ಕುಟುಂಬಗಳು ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಗ್ಯಾರಂಟಿ ಭಾಗ್ಯಗಳು ಎಲ್ಲಾ ಧರ್ಮ, ಸಮುದಾಯಗಳ ಜನಮನ ಗೆದ್ದಿವೆ. ಇದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕನಸು ನನಸಾಗಿದೆ ಎಂದರು‌.

ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರಿಗೆ ತಾಲ್ಲೂಕಿನ ಜನ ಪ್ರೀತಿಯಿಂದ ಕಾಣುತ್ತಿದ್ದರು‌. ಅವರ ಜನಪರ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ನನಗೂ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಕಟುಂಬ ಈ ಭಾಗದಲ್ಲಿ ಯಾವುದೇ ನಾಯಕರನ್ನು ಬೆಳೆಯಲು ಬಿಡಲಿಲ್ಲ‌. ಕಳೆದ 40 ವರ್ಷಗಳಿಂದ ಈ ಭಾಗದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿಕೊಂಡು ಬರಲಾಗುತ್ತಿದೆ. ಇದು ಯಡಿಯೂರಪ್ಪ ಕುಟುಂಬ ಸದಸ್ಯರ ಸಾಧನೆ ಎಂದು ವ್ಯಂಗ್ಯವಾಡಿದರು.

ಇಲ್ಲಿನ ಕುಟುಂಬ ರಾಜಕಾರಣದ ಪಿತೂರಿಗೆ ಮುಂದಿನ ದಿನದಲ್ಲಿ ಯಡಿಯೂರಪ್ಪ ಅವರ ಮೊಮ್ಮಕ್ಕಳೂ ಇಲ್ಲಿಯೇ ಚುನಾವಣೆಗೆ ಸ್ಪರ್ಧಿಸುತ್ತಾರೆ. ಅವರ ಕುಟುಂಬ ಹೊರತು ಪಡಿಸಿ ಚುನಾವಣೆ ಸ್ಪರ್ಧೆಗೆ ಯಾರಿಗೂ ಅವಕಾಶವಿಲ್ಲ. ಎರಡು ತಲೆಮಾರಿನಿಂದ ಈ ಭಾಗದಲ್ಲಿ ಯಡಿಯೂರಪ್ಪ ಅವರು ಅಧಿಕಾರ ಹಿಡಿದ್ದಾರೆ. ಬೇರೆ ಯಾರೂ ಇಲ್ಲಿ ನಾಯಕರಿಲ್ಲವೆ? ಎಂದು ಪ್ರಶ್ನಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಪಿ ನಾಗರಾಜ್ ಗೌಡ ಮಾತನಾಡಿ, ಬಗರ್ ಹುಕುಂ ಸಮಸ್ಯೆ ಸೇರಿದಂತೆ ಅನೇಕ ಬಗೆಹರಿಸಬಹುದಾದ ಸವಾಲುಗಳು ಇಲ್ಲಿವೆ. ಆದರೆ, ಸಂಸದ ಬಿ.ವೈ‌. ರಾಘವೇಂದ್ರ ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕಳೆದ 15 ವರ್ಷದಿಂದ ಇಲ್ಲಿ ಸಂಸದರಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ, ರೈತಾಪಿ ವರ್ಗಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.

ಶಿಕಾರಿಪುರ ತಾಲ್ಲೂಕಿನ ಅತಿ ಹೆಚ್ಚು ರೈತರ ಕೃಷಿ ಪಂಪ್‌ಸೆಟ್ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರು ಉಚಿತ ವಿದ್ಯುತ್ ನೀಡುವ ಮೂಲಕ ರೈತಾಪಿ ವರ್ಗಗಳಿಗೆ ನೆರವಾಗಿದ್ದರು. ಆದರೆ, ಸಂಸದ ರಾಘವೇಂದ್ರ ಅವರು ಈ ರೀತಿಯ ಯಾವುದೇ ಯೋಜನೆಯನ್ನು ಇಲ್ಲಿ ಅನುಷ್ಠಾನಕ್ಕೆ ತರಲಿಲ್ಲ ಎಂದರು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜ್‌ಕುಮಾರ್, ಕೆಪಿಸಿಸಿ ಸದಸ್ಯ ಗೋಣಿ ಮಹಲ್ತೇಶ್, ನಗರದ ಮಹದೇವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ, ಪುಷ್ಪ ಶಿವಕುಮಾರ್, ಧೀರರಾಜ ಹೊನ್ನವಿಲೆ, ಬಲ್ಕೀಷ್ ಭಾನು, ಭಂಡಾರಿ ಮಾಲತೇಶ್, ವೈ.ಎಚ್ ನಾಗರಾಜ್, ಪ್ರವೀಣ್, ಚೇತನ್ ಇದ್ದರು‌.

ದಶಕಗಳಿಂದ ಬಿಜೆಪಿಗೆ ಬೆಂಬಲಿಸುತ್ತಾ ಬಂದಿದ್ದೇವೆ. ಆದರೆ, ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮಹಿಳೆಯರು ಗ್ಯಾರಂಟಿ ಯೋಜನೆಗಳ ಪ್ರತಿಫಲ ಪಡೆಯುತ್ತಿದ್ದಾರೆ‌. ಆದರಿಂದ, ಸಹೋದರಿ ಗೀತಾಗೆ ಮತ ಹಾಕಲು ಮಹಿಳೆಯರು ಒಲವು ತೋರುತ್ತಿದ್ದಾರೆ. ಈ ಬಗ್ಗೆ ಮನೆಯ ಮಹಿಳಾ ಸದಸ್ಯರಿಂದಲೇ ವಾದ ನಡೆಯುತ್ತಿದೆ.
– ಚಂದ್ರಪ್ಪ, ತೋಗರ್ಸಿ, ಸ್ಥಳೀಯ ನಿವಾಸಿ

‘ರಾಮ’ನ ಹೆಸರು ಹೇಳಲು ರಾಘವೇಂದ್ರ ಅನರ್ಹ: ಆಯನೂರು
ರಾಮಾಯಣದಲ್ಲಿ ತಂದೆಯ(ದಶರಥ) ಮಾತು ಉಳಿಸಲು ಅಧಿಕಾರ ತೊರೆದು ರಾಮ ಕಾಡಿಗೆ ಹೋದ, ಆದರೆ, ಇಲ್ಲಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸಾಲು-ಸಾಲು ಆರೋಪಗಳು ಕೇಳಿದ್ದವು. ಇಲ್ಲಿ ತಂದೆಯ ಮರ್ಯಾದೆ ಉಳಿಸಲು ಮಕ್ಕಳು ಏನು ಮಾಡಿದರು? ಇಲ್ಲಿ ತಂದೆಯ ಆಸ್ತಿ, ಅಧಿಕಾರದ ಆಸೆಗೆ ಯಡಿಯೂರಪ್ಪ ಅವರನ್ನು ಮಕ್ಕಳು ಎಲ್ಲಿಗೆ ಕಳುಹಿಸಿದರು ಎಂದು ಜನರೇ ಹೇಳುತ್ತಿದ್ದಾರೆ. ಆದ್ದರಿಂದ ಸಂಸದ ರಾಘವೇಂದ್ರ ರಾಮನ ಹೆಸರು ಹೇಳಿಕೊಂಡು ಮತ ಕೇಳಲು ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಆಯನೂರು ಮಂಜುನಾಥ ಗುಡುಗಿದರು.

Leave A Reply

Your email address will not be published.

error: Content is protected !!