ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿ ಜಾತ್ರೆಗೆ ಹರಿದು ಬಂದ ಭಕ್ತರ ದಂಡು

0 1,400

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ಏಕಶೀಲೆಯ ಹೆಬ್ಬಂಡೆಯಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಾ ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಪರಿಹರಿಸುವ ಶ್ರೀ ಜೇನುಕಲ್ಲಮ್ಮ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂದಿತು.

ಶುಕ್ರವಾರದೊಂದು ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಗೆ ತಾಲ್ಲೂಕು, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ವಾಹನಗಳ ಮೂಲಕ ಸಾಗರೋಪಾದಿಯಲ್ಲಿ ಹರಿದು ಬಂದು ತಮ್ಮ ಸೇವೆಯನ್ನು ಸಮರ್ಪಿಸಿದರು.


ವಿಶೇಷವೆಂದರೆ ಇಲ್ಲಿನ ದೇವಿಗೆ ಬೆಣ್ಣೆ ಮತ್ತು ಬುತ್ತಿಯ ಬುಟ್ಟಿ ಹೊತ್ತು ತಂದು ದೇವಿಗೆ ನೈವೇದ್ಯ ಮಾಡಿಸಿಕೊಂಡು ಅಲ್ಲಿಯೇ ಬಂಡೆಯ ಮೇಲೆ ಕುಳಿತು ಬರುವ ಭಕ್ತರಿಗೂ ಹಂಚಿ ಊಟ ಮಾಡಿದರೆ ಕುಟುಂಬದ ಶ್ರೇಯೋಭಿವೃದ್ದಿ ಹೊಂದುವುದೆಂಬ ನಂಬಿಕೆ ಇಲ್ಲಿನ ಹಲವು ಭಕ್ತರದಾಗಿದೆ.

ಒಟ್ಟಾರೆಯಾಗಿ ಕಂಕಣ ಧಾರಣೆ ಮಾಡಿದ ಹದಿನೈದು ದಿನಗಳ ಕಾಲ ಕಂಕಣ ಕಟ್ಟಿಸಿಕೊಂಡ ವ್ಯಕ್ತಿ ಮನೆಯನ್ನು ತೊರೆದು ದೇವಿಯ ಸನ್ನಿಧಿಯಲ್ಲಿಯೇ ಇದ್ದು ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸುವುದು ಇಲ್ಲಿನ ಪದ್ದತಿಯಾಗಿದೆ. ಇನ್ನು ಸಿಡಿ ಭೂತಪ್ಪ ಮತ್ತು ಉರಿ ಭೂತಪ್ಪ ಸೇರಿದಂತೆ ಭೈರ ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿದರೆ ಬೆನ್ನು ನೋವಿನಿಂದ ಬಳಲುವವರು ಸಿಡಿಬೂತಪ್ಪನಿಗೆ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಿ ಹರಕೆ ಮಾಡಿಕೊಂಡರೆ ಬೆನ್ನು ನೋವು ಮನೆಗೆ ಹೋಗುವುದರೊಳಗೆ ಮಾಯವಾಗುವುದೆಂಬ ಪವಾಡವೇ ಇಲ್ಲಿನ ವಿಶೇಷವೆಂದು ಇಲ್ಲಿನ ಹಲವು ಭಕ್ತರು ತಮ್ಮ ಮನದಾಳದ ಮಾತು ಹಂಚಿಕೊಂಡರು.

ಪ್ರಧಾನ ಆರ್ಚಕ ಭಾಸ್ಕರ್ ಜೋಯ್ಸ್ ಇವರ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ಸಕಲ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ವಿಶೇಷ ಅಲಂಕಾರ ಪೂಜೆಯಲ್ಲಿ ದೇವಿಯ ದರ್ಶನಾಶೀರ್ವಾದ ಪಡೆದು ಭಕ್ತ ಸಮೂಹ ದೇವಿಗೆ ಹರಕೆ ಹಣ್ಣು ಕಾಯಿ ಉಡಿ ಸಮರ್ಪಣೆ ಮಾಡಿದರು. ಜೇನುಕಲ್ಲಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್, ಪ್ರಧಾನ ಕಾರ್ಯದರ್ಶಿ ಸುಧೀರ್‌ ಭಟ್, ಕೋಡೂರು ವಿಜೇಂದ್ರರಾವ್, ಹರೀಶ್, ಡಾಕಪ್ಪ ಬೆಳ್ಳೂರು, ರತ್ನಮ್ಮ, ತಿಮ್ಮಪ್ಪ ಇನ್ನಿತರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಕರಪತ್ರದ ಮೂಲಕ ಪರಿಸರ ಜಾಗೃತಿ:

ಸಮೀಪದ ಕೋಡೂರು ಅಮ್ಮನಘಟ್ಟ ಜಾತ್ರಾ ಮಹೋತ್ಸವದಲ್ಲಿ ಹೊಸನಗರ ಅರಣ್ಯ ಇಲಾಖೆ ಹಾಗೂ ಪರಿಸರವಾದಿ ಕೆ.ಎನ್.ದಾಮೋದರ ಇವರು ಪರಿಸರ ರಕ್ಷಣೆಯೊಂದಿಗೆ ಜಾತ್ರೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುವುದರಿಂದಾಗಿ ಕಾಡು ಪ್ರಾಣಿಗಳು ಮತ್ತು ಜಾನುವಾರುಗಳು ತಿಂದು ಸಾವನ್ನಪ್ಪುತ್ತವೆ. ಇದರಿಂದಾಗಿ ತಾವು ಅಂಗಡಿ ಮುಂಗಟ್ಟುಗಳಲ್ಲಿ ಮಂಡಕ್ಕಿ ಇನ್ನಿತರ ತಿಂಡಿ ಪದಾರ್ಥಗಳನ್ನು ಕೊಂಡು ತಿಂದು ಎಲ್ಲೆಂದರಲ್ಲಿ ಬಿಸಾಡಿ ಪರಿಸರವನ್ನು ಹಾಳು ಮಾಡಬೇಡಿ ಎಂಬ ಪರಿಸರ ಜಾಗೃತಿಯ ಕರಪತ್ರದೊಂದಿಗೆ ಪರಿಸರ ಜಾಗೃತಿ ಕಾರ್ಯವನ್ನು ಮಾಡುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು.

Leave A Reply

Your email address will not be published.

error: Content is protected !!