ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆ ಕೃಷಿಗೆ ಪೂರಕವಾಗುತ್ತದೆ ; ಡಾ. ಬಸವರಾಜ್ ಬೀರಣ್ಣನವರ್

0 357

ಹೊಸನಗರ : ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆ ಕೃಷಿಗೆ ಪೂರಕವಾಗುತ್ತದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯ, ಶಿವಮೊಗ್ಗದ ಪ್ರಾದ್ಯಾಪಕರು ಮತ್ತು ಸಂವಹನ ಕೇಂದ್ರದ ಸಂಪಾದಕ ಡಾ. ಬಸವರಾಜ್ ಬೀರಣ್ಣನವರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾರುತಿಪುರದಲ್ಲಿ ಕೃಷಿ ವಿದ್ಯಾರ್ಥಿಗಳು ರೈತರಿಗಾಗಿ ವೈವಿಧ್ಯಮಯವಾಗಿ ನಿರ್ಮಿಸಿರುವ “ಕೃಷಿ ಮಾಹಿತಿ ಕೇಂದ್ರದ” ಉದ್ಘಾಟನೆ ಮಾಡಿ, ಕೊನೆಯ ವರ್ಷದ ಕೃಷಿ ವಿದ್ಯಾರ್ಥಿಗಳು ಕೈಗೊಂಡಿರುವ ಗ್ರಾಮಿಣಾನುಭವ ಕಾರ್ಯಕ್ರಮದಲ್ಲಿ ಪ್ರತಿದಿನ ಕೃಷಿ ವಿದ್ಯಾರ್ಥಿಗಳು ಮತ್ತು ವಿವಿಧ ಕೃಷಿ ಮತ್ತು ತೋಟಗಾರಿಕೆ ವಿಷಯ ತಜ್ಞರು ಹಳ್ಳಿಗಳಿಗೆ ಭೇಟಿ ನೀಡಿ ರೈತರಿಗೆ ಬೇಕಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ, ಇದರಿಂದ ಕೃಷಿ ವಿಶ್ವ ವಿದ್ಯಾಲಯವೇ ರೈತರ ಮನೆ ಬಾಗಿಲಿಗೆ ಬಂದಂತಾಗಿದೆ ಎಂದರು.

ಟಇದೆ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯನ್ನು ಕೃಷಿಯಲ್ಲಿ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿರು ಪರಿಚಯ ಮಾಡಿದರು ಮತ್ತು ಕೃಷಿ ವಿಶ್ವ ವಿದ್ಯಾಲಯದಿಂದ ರೈತರಿಗೆ ದೊರಕುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ನವಗ್ರಹ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಬುಧವಾರ ಮಾರುತಿಪುರದಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ರೈತರೊಂದಿಗೆ ಮಾರುತಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸೇರಿಸಿಕೊಂಡು ಮಾಡಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ನೇಗಿಲಿಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಗ್ರಾಮಸ್ಥರಲ್ಲಿ ಹೊಸ ಹುರುಪನ್ನು ತಂದು ಹಳ್ಳಿಯ ಸಂಸ್ಕೃತಿಯನ್ನು ಬಿಂಬಿಸಿದ್ದು ಕಾರ್ಯಕ್ರಮದ ಕೇಂದ್ರ ಬಿಂದವಾಗಿತ್ತು.

ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಿಕಾ ಕೃಷ್ಣ ಮಾತನಾಡಿ, ರಾಸಾಯನಿಕ ಗೊಬ್ಬರ ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತದೆ. ಗ್ರಾಮ ಪಂಚಾಯತಿ ರೈತರ ಸೇವೆಯಲ್ಲಿ ಸದಾ ತೊಡಗುತ್ತದೆ ಆದರೆ ರೈತರಿಗೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ದೊರಕಲು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ಪ್ರಮುಖ ಪಾತ್ರವಹಿಸಿದೆ. ಈ ಕೆಲಸವನ್ನು ನವಗ್ರಹ ತಂಡದವರು ತುಂಬಾ ಆಸಕ್ತಿಯಿಂದ ಮಾಡಿದ್ದು ಹೊಸನಗರ ತಾಲೂಕಿನಲ್ಲಿ ನಮ್ಮ ಗ್ರಾಮ ಪಂಚಾಯತಿಗೆ ಇವರು ಬಂದಿರುವುದು ತುಂಬಾ ಖುಷಿ ತಂದಿದೆ. ಇವರ ಇಷ್ಟು ದಿನಗಳ ಕೆಲಸಕ್ಕೆ ಹಾಗೂ ಮುಂದಿನ ದಿನಗಳಲ್ಲಿ ಇವರಿಗೆ ಗ್ರಾಮ ಪಂಚಾಯಿತಿಯು ಸದಾ ನಿಮ್ಮೊಂದಿಗೆ ಇರುತ್ತದೆ ಎಂದರು‌.

ನಂತರ ಮಾತನಾಡಿದ ಗ್ರಾಮದ ಹಿರಿಯರಾದ ಮಂಜುನಾಥ್ ಪೂಜಾರಿ, ಕೃಷಿ ವಿಶ್ವವಿದ್ಯಾಲಯ ಮತ್ತು ರೈತರ ನಡುವೆ ಇರುವ ಅಂತರವನ್ನು ಅಳಿಸಲು ಕೃಷಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ. ಕೃಷಿ ಯಾವ ರೀತಿ ದೇಶದ ಬೆನ್ನೆಲುಬು ಹಾಗೆಯೇ ಕೃಷಿ ವಿದ್ಯಾರ್ಥಿಗಳ ಕಾರ್ಯವು ಬಹಳ ಒಳ್ಳೆಯ ಪ್ರಭಾವವನ್ನು ಬೀರಿದೆ ಎಂದು ತಿಳಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರಾದ ಭಾರತಿ ಮಾತನಾಡಿ, ಕೃಷಿ ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಹಾಗೆ ಅವರ ಶ್ರಮವೂ ಈ ಹಳ್ಳಿಯ ಪ್ರತಿ ರೈತರ ಮನೆ ಬಾಗಿಲಿಗೆ ಹೋಗಿ ತಲುಪಿದೆ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನುಡಿಯನ್ನು ನುಡಿದು ಶುಭಕೋರಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ಮಾತನಾಡಿ, ಈ ಭಾಗದ ಮುಕ್ಯ ಬೆಳೆಗಳಲ್ಲಿ ಬರುವ ರೋಗಗಳ ಬಗ್ಗೆ ಮಾಹಿತಿ ತುಂಬಾ ಉಪಯೋಗಕಾರವಾಗಿದೆ. ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರಜ್ಞರನ್ನು ತೋಟಕ್ಕೆ ಕರೆದುಕೊಂಡು ಬಂದಿದ್ದು ತುಂಬಾ ಸಂತಸ ತಂದಿದೆ. ವಿಶ್ವವಿದ್ಯಾಲಯದ ಹಾಗೂ ರೈತರ ಒಡನಾಟ ಹೀಗೆ ಮುಂದು ಒರೆಯಲಿ ಎಂದು ಆಶಿಸಿದರು.

ಕೃಷಿ ಮಾಹಿತಿ ಕೇಂದ್ರದಲ್ಲಿ ರೈತರಿಗೆ ಉಪಯೋಗವಾಗುವ ಅನೇಕ ಮಾಹಿತಿಯನ್ನು ರೈತರಿಗೆ ಸುಲಭವಾಗಿ ಅರ್ಥವಾಗುವಂತೆ ಅನೇಕ ಬಿತ್ತಿಚಿತ್ರ ಮತ್ತು ಮಾದರಿಗಳ ಮೂಲಕ ವಿವರಿಸಲಾಗಿದೆ. ಇದರೊಂದಿಗೆ ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವುದು, ಕೈತೋಟ ಬೆಳೆಸುವುದು, ಅಜೋಲ ಬೆಳೆಸುವುದರ ಬಗ್ಗೆ ಪದ್ಧತಿ ಪ್ರಾತ್ಯಕ್ಷತೆಯನ್ನು ಮಾಡಿ ತೋರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಸಹಾಯಕ ಪ್ರಾಧ್ಯಾಪಕಿ ಡಾ. ಶಶಿಕಲಾ, ಡಾ. ಅರುಣ್ ಕುಮಾರ್, ಡಾ.ಸಿದ್ದಾರೂಢ ಮತ್ತು ಡಾ.ನಿಂಗರಾಜು ರವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!