ಕಾಂತರಾಜ್ ಆಯೋಗದ ವರದಿ ಜಾರಿಗೆ ಆಗ್ರಹ

0 112

ಶಿವಮೊಗ್ಗ: ಹಿಂದುಳಿದ ವರ್ಗಗಗಳ ಸಮೀಕ್ಷೆಯಾಗಿರುವ ಕಾಂತರಾಜ್ ವರದಿ (Kantharaj Report) ವೈಜ್ಞಾನಿಕವಾಗಿದ್ದು ಕೂಡಲೇ ಅದನ್ನು ಸ್ವೀಕರಿಸಿ ಜಾರಿಗೊಳಿಸಬೇಕು. ಶೋಷಣೆಗೆ ಒಳಪಟ್ಟ ಹಿಂದುಳಿದ ಜಾತಿ ಜನಾಂಗಗಳಿಗೆ ಈ ವರದಿ ಜಾರಿಯಾಗದಿದ್ದಲ್ಲಿ ಭಾರೀ ಅನ್ಯಾಯವಾಗಲಿದೆ. ಆ ಸಮಾಜದ‌ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಜಿಲ್ಲಾ ನಾರಾಯಣಗುರು ವಿಚಾರ ವೇದಿಕೆ ಹೇಳಿದೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ ಹಿರೇಇಡಗೋಡು, ಈ ವರದಿ ಜಾರಿಯಾದೇ ಇದ್ದರೆ ಸಾಮಾಜಿಕ ನ್ಯಾಯ ದೊರೆಯದೆ ಸಮಾನತೆ ಸಾಧಿಸಲು‌ ಸಾಧ್ಯವಾಗುವುದಿಲ್ಲ. ಈಗ ಈ ವರದಿಯನ್ನು ಸ್ವೀಕರಿಸಬಾರದೆಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೆಲ್ಲ ಮೀರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸಬೇಕೆಂದು ಹೇಳಿದರು.

ಕರ್ನಾಟಕ ಸರ್ಕಾರವು 2014 ಜನವರಿ 20ರಲ್ಲಿ ಸುಪ್ರೀಂಕೋರ್ಟ್ ಆದೇಶದನ್ವಯ ಹೆಚ್. ಕಾಂತ್‌ರಾಜ್ ಆಯೋಗವನ್ನು ರಚಿಸಿತು. ಈ ಆಯೋಗವು ಸುಮಾರು 55 ಮಾನದಂಡಗಳನ್ನು ಬಳಸಿ ಹಿಂದುಳಿದ ವರ್ಗಗಳ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ ಹಾಗೂ ಜಾತಿಗಳ ಜನಸಂಖ್ಯೆ ರಾಜಕೀಯ ಅಧಿಕಾರಗಳ ಬಗ್ಗೆ ಐದು ವರ್ಷಗಳ ಕಾಲ ವೈಜ್ಞಾನಿಕ ಅಧ್ಯಯನ ನಡೆಸಿ “ಹಿಂದುಳಿದ ವರ್ಗಗಳ” ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು 2018 ರಲ್ಲಿ ಆಗಿನ ಮುಖ್ಯಮಂತ್ರಿಗೆ ಸಲ್ಲಿಸುವಷ್ಟರ ವೇಳೆಗೆ ಸರ್ಕಾರ ಬದಲಾಗಿದ್ದರಿಂದ ವರದಿ ಸಲ್ಲಿಕೆಯಾಗಲೇ ಇಲ್ಲ. ನಂತರ ಬಂದವರಾರೂ ಅದರ ಬಗ್ಗೆ ಆಸಕ್ತಿ ತಳೆಯಲಿಲ್ಲ. ಸಿದ್ದರಾಮಯ್ಯ ಈಗ ಮತ್ತೆ ಮುಖ್ಯಮಂತ್ರಿಯಾಗಿರುವುದರಿಂದ ಅವರು ಮುಂದಾಗಿ ವರದಿ ಸ್ವೀಕರಿಸಿ ಅದನ್ನು ಜಾರಿಗೆಗೊಳಿಸುವ ಕೆಲಸ ಮಾಡಬೇಕು. ಈ ಮೂಲಕ ಹಿಂದುಳಿದ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ಭಾರತದ ಸಂವಿಧಾನ ಪಲಭೇದ 15(4) 16(4) ಹಾಗೂ 370 ರಲ್ಲಿ ಹಿಂದುಆದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ತಿಳಿಸಿದೆ, ಇದರ ಪ್ರಕಾರ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಹಾವನೂರು ವರದಿ ಜಾರಿಗೆ ಕೊಡುವುದರ ಮೂಲಕ ಮೊಟ್ಟಮೊದಲಿಗೆ ಕರ್ನಾಟಕದಲ್ಲಿ ಹಿಂದುಳಿದವರಿಗೆ ನ್ಯಾಯ ದೊರೆತಿದೆ. ನಂತರ 1992ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ವಿ.ಪಿ. ಸಿಂಗ್ ದೇಶದಲ್ಲಿ ಕೇಂದ್ರ ಸರ್ಕಾರದ ಮಂಡಲ್ ಆಯೋಗದ ವರದಿ ಜಾರಿ ಮಾಡಿ ಹಿಂದುಳಿದವರಿಗೆ ಮೀಸಲಾತಿಯ ಹಕ್ಕು ದೊರೆಯುವಂತೆ ಮಾಡಿದರು ಎನ್ನುವುದನ್ನು ನೆನಪಿಸಿದರು.

ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯ ಮುಖಂಡರಾದ ಸುಧಾಕರ ಶೆಟ್ಟಿಹಳ್ಳಿ, ಉಮೇಶ್, ಕೆ ಎಲ್, ಪುನೀತ್ ಬೆಳ್ಳೂರು, ವಿಕಾಸ್ ಕುನ್ನೂರು, ಬಿ. ಗಣಪತಿ, ಎಸ್. ಕೃಷ್ಣಮೂರ್ತಿ, ಎಂ.ಆರ್.ಲಕ್ಷ್ಮಣ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!