ಚಂದ್ರಗುತ್ತಿಯಲ್ಲಿ ದೀಪಾವಳಿ ಬಲಿಪಾಡ್ಯಮಿ ಹಬ್ಬ ವಿಜೃಂಭಣೆಯಿಂದ ಆಚರಣೆ

0 531

ಸೊರಬ : ಗ್ರಾಮೀಣ ಭಾಗದಲ್ಲಿ ಗೋವುಗಳ (Cows) ಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿ (Deepavali) ಬಲಿಪಾಡ್ಯಮಿ ಹಬ್ಬವನ್ನು (Festival’s) ಮಂಗಳವಾರ ಸೊರಬ (Soraba) ತಾಲೂಕಿನ ಚಂದ್ರಗುತ್ತಿಯಲ್ಲಿ (Chandragutti) ವಿಜೃಂಭಣೆಯಿಂದ ಆಚರಿಸಿದರು.

ರೈತರು ಪ್ರೀತಿಯಿಂದ ಸಾಕಿರುವ ಜಾನುವಾರುಗಳಿಗೆ ಬಗೆ ಬಗೆಯ ಬಲೂನ್ ಮತ್ತು ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳಿಂದ ಸಿಂಗರಿಸಿ ಹಾಗೂ ಕೊಟ್ಟಿಗೆ ಬಾಗಿಲುಗಳಿಗೆ ತಳಿರು ತೋರಣ ಅಲಂಕಾರವನ್ನು ಮಾಡಲಾಗಿತ್ತು. ಹಸು-ಕರು ಎತ್ತುಗಳ ಮೈ ತೊಳೆದು ಶುದ್ಧಗೊಳಿಸಿ ವೈಯಿಗೆ ಬಣ್ಣ ಬಣ್ಣದ ಪಟ್ಟೆ ಬಳಿದು ಕೊರಳಿಗೆ ಅಡಿಕೆ ಸಿಂಗಾರ, ಹೂವಿನಿಂದ ಅಲಂಕಾರ, ವೀಳ್ಯೆದೆಲೆ, ಸಪ್ಪೆರೊಟ್ಟಿ, ಇರುವ ಹಾರ ಹಾಕಿ ಪೂಜಿಸಿದರು.

ಗೋ ಪೂಜೆ:

ಅಕ್ಕಿ, ಬೆಲ್ಲ, ಬಾಳೆಹಣ್ಣು ಮಿಶ್ರಣದ ಗೋಗ್ರಾಸ ಮತ್ತು ಕಡುಬನ್ನು ಗೋವುಗಳಿಗೆ ನೈವೇದ್ಯವಾಗಿ ನೀಡಿ ಕಾಲು ಪೂಜೆಯನ್ನು ಸಲ್ಲಿಸಿ ಭಕ್ತಿಯಿಂದ ಪ್ರಾರ್ಥಿಸಿದರು.

ಗ್ರಾಮಸ್ಥರು ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಅಕ್ಷೆ ಬಾಗಿಲಿನಿಂದ ಎತ್ತುಗಳನ್ನು ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಿದರು. ಇನ್ನು ಹಬ್ಬದ ಹೋರಿಗಳಾದ ಚಂದ್ರಗುತ್ತಿ ಚಕ್ರವರ್ತಿ, ಚಂದ್ರಗುತ್ಯಮ್ಮ, ಬೆಳ್ಳಿ ಕುದುರೆ ಹೋರಿಗಳ ಹಾಗೂ ವಿವಿಧ ಹೆಸರಿನ ಹೋರಿಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಅಲ್ಲದೇ ದೀಪಾವಳಿ ಹಬ್ಬದಲ್ಲಿ ಎತ್ತುಗಳಿಗೆ ಕನ್ನಡದ ಬಾವುಟವನ್ನು ಕಟ್ಟಿ ಶೃಂಗರಿಸಿ ಕನ್ನಡಾಭಿಮಾನ ಮೆರೆದಿದ್ದು ವಿಶೇಷವಾಗಿತ್ತು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಜೋರಾಗಿಯೇ ಕೇಳಿ ಬರುತ್ತಿತ್ತು ಮತ್ತು ಹೂಗಳನ್ನು ಹಾಕಿ ಸ್ವಾಗತಿಸುತ್ತಿದ್ದರು.

ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಅಧಿಸೂಚಿತ ದೇವಾಲಯಗಳಲ್ಲಿ ಗೋ ಪೂಜೆ ಆಚರಣೆಗೆ ಮುಜರಾಯಿ ಇಲಾಖೆ ಸೂಚನೆ ನೀಡಿದ್ದು ಈ ಹಿನ್ನೆಲೆಯಲ್ಲಿ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆಯನ್ನು ಸಂಪ್ರದಾಯದಂತೆ ವಿಧಿ-ವಿಧಾನಗಳೊಂದಿಗೆ ಆಚರಿಸಲಾಯಿತು.

ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಅವರು ದೇವಸ್ಥಾನದಲ್ಲಿ ನಡೆದ ಗೋವುಗಳ ಪೂಜೆಗೆ ಚಾಲನೆ ನೀಡಿದರು.

ಕೃಷಿಕರು ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ಫಸಲು ತಂದು ದೇವರಿಗೆ ಅರ್ಪಿಸಿ ವಿಶೇಷ ಪೂಜೆ, ಸಿಹಿ ಕಜ್ಜಾಯ, ಬಗೆ ಬಗೆಯ ನೈವೇದ್ಯಗಳನ್ನು ಅರ್ಪಿಸಲಾಯಿತು.

ಗ್ರಾಮದ ಮನೆ ಬಾಗಿಲುಗಳಲ್ಲಿ ಹಸಿರು ತೋರಣದಿಂದ ಅಲಂಕರಿಸಲಾಗಿತ್ತು. ಮನೆಯಂಗಳನ್ನು ಬಳಿದು ಬಿಡಿಸಿದ ರಂಗೋಲಿ ಚಿತ್ತಾರಗಳು ಗಮನ ಸೆಳೆದವು. ಸಂಜೆ ಗ್ರಾಮೀಣ ಭಾಗಗಳಲ್ಲಿ ದೀಪಾವಳಿ ಬೆಳಕಿನಲ್ಲಿ ಜಗಮಗಿಸುವ ನಕ್ಷತ್ರಗಳ ಮಧ್ಯೆ ಆಕರ್ಷಕ ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು. ಗ್ರಾಮದ ಯುವಕರು ನೆಚ್ಚಿನ ಹೋರಿ ಜೊತೆ ಫೋಟೋ ತೆಗೆದುಕೊಳ್ಳುವ ಮೂಲಕ ಕಂಗೊಳಿಸಿದರು.

ಗೋವುಗಳ ಸ್ವಾಗತಕ್ಕೆ ಬಲಿಪಾಡ್ಯಮಿ ಹಿಂದಿನ ರಾತ್ರಿ ಗ್ರಾಮದಲ್ಲಿ ಊರಿನ ಪ್ರಮುಖರು ಯುವಕರೆಲ್ಲ ಸೇರಿ ತಳಿರು ತೋರಣ, ಬಾಳೆ ಕಂಬ, ಹೂಗಳನ್ನು ಕಟ್ಟಿ ಗ್ರಾಮದ ಅಕ್ಷೆ ಬಾಗಿಲನ್ನು ಅಲಂಕರಿಸಿದ್ದರು.

Leave A Reply

Your email address will not be published.

error: Content is protected !!