ಜಾವಳ್ಳಿ ಜ್ಞಾನದೀಪ ಶಾಲೆ ರಜತ ಮಹೋತ್ಸವ | ಡಿ.11 ರಿಂದ 17 ರವರೆಗೆ ವಿಭಿನ್ನ ಕಾರ್ಯಕ್ರಮ

0 346

ಶಿವಮೊಗ್ಗ : ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಂಕಡರಿ ಶಾಲೆಯ ರಜತ ಮಹೋತ್ಸದ ಅಂಗವಾಗಿ ಬೆಳ್ಳಿ ಹಬ್ಬವನ್ನು ಡಿ.11ರಿಂದ 17ರವರೆಗೆ ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಶ್ರೀಕಾಂತ್ ಎಂ. ಹೆಗಡೆ ತಿಳಿಸಿದರು.

ಅವರು ಶುಕ್ರವಾರ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1999ರಲ್ಲಿ 36 ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರೀಸ್ಕೂಲ್‌ನಿಂದ ಹನ್ನೆರಡನೇ ತರಗತಿಯವರೆಗೆ ಒಟ್ಟು 2500 ವಿದ್ಯಾರ್ಥಿಗಳಿಗೆ ಜ್ಞಾನದೀಪ ಶಾಲೆ ಜ್ಞಾನವನ್ನು ಧಾರೆ ಎರೆಯುತ್ತಿದೆ ಎಂದರು.

ಶಾಲೆಯು ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಪಡೆದು ಶಾಲೆ, ನಾಡಿಗೆ, ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ. ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಲವು ಬಾರಿ ಭಾಗವಹಿಸಿ ಬಹುಮಾನಗಳಿಸಿದ ಹೆಗ್ಗಳಿಕೆ ಜ್ಞಾನದೀಪ ಶಾಲೆಯದ್ದಾಗಿದೆ ಎಂದರು.

ಮಕ್ಕಳಿಗೆ ಹವ್ಯಾಸಿ ಕಲೆಗಳಾದ ನಾಟಕ, ಭರತನಾಟ್ಯ, ಯಕ್ಷಗಾನ, ಕರಾಟೆ, ಸಂಗೀತ, ಚಿತ್ರಕಲೆ, ವಾದ್ಯ ಸಂಗೀತ, ಬ್ಯಾಂಡ್‌ಸೆಟ್‌ಗಳ ತರಬೇತಿಯನ್ನು ನುರಿತ ಅನುಭವಿ ಶಿಕ್ಷಕರಿಂದ ಕೊಡಿಸುವ ಮೂಲಕ ಅವರಿಗೆ ಕಲೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪ್ರೀಸ್ಕೂಲ್‌ನಿಂದ ಹನ್ನೆರಡನೇ ತರಗತಿಯವರೆಗೆ ಸಿ.ಬಿ.ಎಸ್.ಇ. ತರಗತಿಗಳನ್ನು ನಡೆಸುತ್ತಿರುವ ಶಿವಮೊಗ್ಗ ಜಿಲ್ಲೆಯ ಏಕೈಕ ಶಾಲೆ ಎಂಬ ಹೆಗ್ಗಳಿಕೆಯಾಗಿದೆ ಎಂದರು.

ಡಿ.11ರ ಬೆಳಿಗ್ಗೆ 10ಗಂಟೆಗೆ ಕೂಡಲಿ ಶೃಂಗೇರಿ ಮಹಾಸಂಸ್ಥಾನಮ್‌ನ ಶ್ರೀ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ ಜ್ಞಾನದೀಪ ಬೆಳ್ಳಿಹಬ್ಬ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ತಲವಾನೆ ಪ್ರಕಾಶ್‌ವಹಿಸಲಿದ್ದಾರೆ. ಇಪ್ಪತ್ತೈದು ವರ್ಷಗಳ ಹೆಜ್ಜೆ ಗುರುತುಗಳನ್ನು ಡಾ|| ಪಿ. ನಾರಾಯಣ್‌ರವರು ಸಭೆಗೆ ಪರಿಚಯಿಸಲಿದ್ದಾರೆ ಎಂದರು.

ಡಿ.12ರಂದು ವಿದ್ಯಾರ್ಥಿಗಳಿಂದ ವಿಜ್ಞಾನ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದ್ದು, ಉದ್ಘಾಟನೆಯನ್ನು ಗಗನಯಾನ ಪ್ರಾಜೆಕ್ಟ್ ಇಸ್ರೋ ಬೆಂಗಳೂರು ಇದರ ಮಿಷನ್ ನಿರ್ದೇಶಕ ಡಾ|| ಆರ್. ಹಟನ್ ನೆರವೇರಿಸಲಿದ್ದಾರೆ. ಗಗನಯಾನ ಮಿಷನ್ ಬಗ್ಗೆ ಶ್ರೀಯುತರು ಉಪನ್ಯಾಸ ಹಾಗೂ ಸಂವಾದವನ್ನು ನಡೆಸಲಿದ್ದಾರೆ. ಡಿ.13ರಂದು ಜ್ಞಾನದೀಪ ಶಾಲೆಯಲ್ಲಿ ಓದಿ ಹೆಮ್ಮೆಯ ಸಾಧನೆಯನ್ನು ಮಾಡಿರುವ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾಠ್ಯಕ್ರಮ ಇರುತ್ತದೆ. ಸಂವಾದದಲ್ಲಿ ಸಾಧಕರಾದ ಪಿಯರ್‌ಲೈಟ್, ಲೈನರ್ ಮತ್ತು ಫೌಂಡರ್‌ನ ನಿರ್ದೇಶಕ ಅಂಕಿತ್ ದಿವೇಕರ್, ಸೀನಿಯರ್ ಎಂಜಿನಿಯರ್ & ಬ್ಯುಸಿನೆಸ್ ಕಂಪ್ಸಲೆಂಟ್ ಆಗಿರುವ ವಿನಯ್ ದೊಡ್ಡಮನೆ ಹಾಗೂ ಚಾರ್ಟೆಡ್ ಅಕೌಂಟೆಂಟ್ ತೇಜಸ್ ಕೆ.ಎಸ್. ಭಾಗವಹಿಸಲಿದ್ದಾರೆ ಎಂದರು.

ಡಿ.14ರಂದು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಶಾಲಿಗಳಾದ 2150 ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರ ರಾಷ್ಟ್ರೀಯ ಕ್ರೀಡಾಪಟು ಎಸ್.ಎಸ್.ಅಶೋಕ್ ಕುಮಾರ್ ಹಾಗೂ ಪ್ರಸಿದ್ಧ ನಾಟಕ ಹಾಗೂ ಚಲನಚಿತ್ರ ಕಲಾವಿದರಾದ ಎಂ.ಎನ್.ಸುರೇಶ್ ಭಾಗವಹಿಸಲಿದ್ದಾರೆ. 15ರಂದು ಸಂಜೆ 5:30ಕ್ಕೆ ಚನ್ನಗಿರಿ, ಶಿವಮೊಗ್ಗ, ಭದ್ರಾವತಿ ಹಾಗೂ ಕೈಮರಗಳಲ್ಲಿರುವ ಜ್ಞಾನದೀಪ ಪ್ರೀಸ್ಕೂಲ್‌ನ ಎಲ್ಲಾ ವಿದ್ಯಾರ್ಥಿಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಸಾಹಿತಿ ಡಾ|| ಜಯಪ್ರಕಾಶ್ ಮಾವಿನಕುಳಿ ಭಾಗವಹಿಸುತ್ತಿದ್ದಾರೆ ಎಂದರು.

ಡಿ.16 ಮತ್ತು 17ರಂದು ಜ್ಞಾನದೀಪ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 17ರ ಮಧ್ಯಾಹ್ನ 2ಗಂಟೆಗೆ ಪದ್ಮಭೂಷಣ ಡಾ|| ಬಿ.ಎನ್ ಸುರೇಶ್‌ರವರು ಶಿಕ್ಷಣ, ಕ್ರೀಡೆ, ವಿಜ್ಞಾನ, ಏರೋಬಿಕ್ಸ್ ವಿಭಾಗದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿದ ಸುಮಾರು 150 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ. ನಂತರದ ಸಕ್ಸಸ್‌ಫುಲ್ ಅಚೀವ್‌ಮೆಂಟ್ ಆಫ್ ಚಂದ್ರಯಾನ -3 ಮತ್ತು ಆದಿತ್ಯ ಎಲ್- 1 ಎಂಬ ವಿಷಯದ ಬಗ್ಗೆ ಡಾ|| ಬಿ.ಎನ್.ಸುರೇಶ್‌ರವರು ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಆ ದಿನ ಸಂಜೆ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಸಂಜೆ 5:30ಕ್ಕೆ ವಿದ್ಯಾರ್ಥಿಗಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ಖಜಾಂಚಿ ಡಾ.ಕೆ.ಆರ್.ಶ್ರೀಧರ್ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!