ದೇಶದ ಕಾನೂನು ಪಾಲನೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ; ನ್ಯಾಯಾಧೀಶ ರವಿಕುಮಾರ್ ಕೆ

0 301

ಹೊಸನಗರ : ಕಾನೂನುಗಳು ದೇಶ ಹಾಗೂ ಪ್ರಜೆಗಳ ಹಿತಕ್ಕಾಗಿ ರಚನೆಯಾಗಿವೆ. ಅವುಗಳನ್ನು ಪಾಲಿಸುವುದು ಹಾಗೂ ಕಾಲಕಾಲಕ್ಕೆ ಬದಲಾಗುವ ನಿಯಮಗಳನ್ನು ಅನುಸರಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ರವಿಕುಮಾರ್ ಕೆ ಹೇಳಿದರು.


ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಹಾಗೂ ಮಲೆನಾಡು ಪ್ರೌಡ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ನೆರವು ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳು ಏರ್ಪಡಿಸಿದ್ದ ಕಾನೂನು ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ದೇಶದ ನ್ಯಾಯ ವ್ಯವಸ್ಥೆಯನ್ನು ಗೌರವದಿಂದ ಕಾಣಬೇಕು. ನ್ಯಾಯಾಂಗ ಎನ್ನುವುದು ಸರಕಾರಿ ಕಛೇರಿಯಲ್ಲ. ಸಂವಿಧಾನದ ಅಡಿಯಲ್ಲಿ ಸ್ವತಂತ್ರವಾಗಿ ಕಾರ‍್ಯನಿರ್ವಹಿಸುವ ಸಂಸ್ಥೆಯಾಗಿದೆ. ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು. ತಂತ್ರಜ್ಞಾನ ಬದಲಾದಂತೆ ಹಲವು ಸವಾಲುಗಳು ಎದುರಾಗುತ್ತಿವೆ. ಇದಕ್ಕೆ ತಕ್ಕಂತೆ ಕಾನೂನುಗಳಲ್ಲಿಯೂ ಮಾರ್ಪಾಡುಗಳಾಗಿವೆ. ಹೊಸ ಕಾನೂನುಗಳು ಜಾರಿಗೆ ಬರುತ್ತಿವೆ. ಪ್ರತಿಯೊಬ್ಬ ಪ್ರಜೆಯೂ ಶಾಂತಿ ಸಹಬಾಳ್ವೆಯ ಜೀವನ ಸಾಗಿಸಬೇಕೆನ್ನುವುದು ದೇಶದ ಸಂವಿಧಾನದ ಆಶಯವಾಗಿದೆ ಎಂದರು.


ಕಾನೂನು ಇರುವವರೆಗೆ ಅದರ ಪಾಲನೆ ಅನಿವಾರ್ಯ ಎಂದ ಅವರು, ನಮ್ಮ ಚಿಂತನೆ, ಆಲೋಚನೆ ಪ್ರತಿಕ್ರಿಯೆಗಳು ಕಾಯ್ದೆಯ ಪರಿಪಾಲನೆಯ ಜೊತೆಗೆ ಇರಬೇಕು, ಕಾನೂನು ಎಂಬುದು ಒಂದು ವ್ಯವಸ್ಥೆಯಾಗಿದ್ದು ಅದು ಸಮಾಜಕ್ಕೆ ಪೂರಕವಾಗಿರಬೇಕು, ಜನರ ಭಾವನೆಗಳು ಬಹುಮುಖವಾಗಿದ್ದಾಗ ಕಾನೂನಿನ ಅಗತ್ಯತೆ ಉಂಟಾಗುತ್ತದೆ. ಕಾನೂನು ಹಾಗೂ ಧರ್ಮ ಪರಿಪಾಲನೆ ನಿಂತ ನೀರಲ್ಲ ಕಾನೂನು ಬಿಟ್ಟು ಸಮಾಜವಿರಲು ಸಾಧ್ಯವಿಲ್ಲ ಸಮಾಜಕ್ಕೆ ಕಾನೂನಿನ ನೆಲೆಯ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಮಹಿಳೆಯರು ಮಕ್ಕಳು ನೊಂದವರು ದೌರ್ಜನ್ಯಕ್ಕೆ ಒಳಗಾದ ಅನೇಕ ಅಸಹಾಯಕರಿಗೆ ಉಚಿತ ಕಾನೂನು ನೆರವು ನೀಡುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಸಮಿತಿ ರಚಿಸಲಾಗಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.


ಕಾಲೇಜು ಪ್ರಾಚಾರ್ಯ ಸ್ವಾಮಿರಾವ್ ಮಾತನಾಡಿ, ಕಾನೂನಿನ ಕುರಿತು ವಿದ್ಯಾರ್ಥಿಗಳು ಸೂಕ್ತ ಅರಿವು ಹೊಂದಿರಬೇಕು. ಯುವಜನತೆಯಿಂದಲೇ ಕಾನೂನು ಉಲ್ಲಂಘನೆಯ ಪ್ರಕರಣಗಳು ಹೆಚ್ಚುತ್ತಿರುವುದು ಆಘಾತಕಾರಿ ಎಂದರು.
ಪೊಲೀಸ್ ಸಿಬ್ಬಂದಿ ಹಾಲೇಶಪ್ಪ, ಮಾಹಿತಿ ತಂತ್ರಜ್ಞಾನದ ಕುರಿತು ಮತ್ತು ವಕೀಲರ ಸಂಘದ ಅಧ್ಯಕ್ಷರಾದ ವಾಲೆಮನೆ ಶಿವಕುಮಾರ್ ಕಾನೂನಿನ ಅರಿವು ಬಗ್ಗೆ ಉಪನ್ಯಾಸ ನೀಡಿದರು.


ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿರಾವ್, ಉಪನ್ಯಾಸಕರಾದ ದಾಮೋದರ ಶೆಣೈ, ಮಾಹಾಂತೇಶ್, ಸೀಮಾ, ಗಣೇಶ್, ನ್ಯಾಯಾಲಯದ ಸಿಬ್ಬಂದಿ ರೇಖಾ ಹರೀಶ್ ಲೋಕ ಅದಾಲತ್ ಗುರುರಾಜ್ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!