ಮಲೆನಾಡಿನ ಸಮಸ್ಯೆಗಳಿಗೆ ಉತ್ತರಿಸಿ ಮತ ಕೇಳಿ ; ಗಣೇಶ್ ಬಿ.ಬೆಳ್ಳಿ

0 371

ಹೊಸನಗರ: ಮಲೆನಾಡಿನ ಭೂ ಒತ್ತುವರಿ, ಅರಣ್ಯ ನಾಶ ಮತ್ತು ಅರಣ್ಯ ಭೂಮಿ ಸಾಗುವಳಿದಾರ ಸಮಸ್ಯೆಗಳನ್ನು ಮತ್ತು ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಜೀವಂತವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಾ ಬಂದ ಕಾಂಗ್ರೆಸ್, ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳು ಜನರ ನಡುವೆ ಜೀವಂತವಾಗಿರುವ ಪ್ರಶ್ನೆಗಳಿಗೆ ಉತ್ತರಿಸಿ ಮತ ಕೇಳಬೇಕಾಗಿದೆ ಎಂದು ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ಗಣೇಶ್ ಬೆಳ್ಳಿಯವರು ಹೇಳಿದರು.

ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಲೋಕಸಭೆಯ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹೊಸನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಮಲೆನಾಡಿನಲ್ಲಿ 1916 ರಿಂದ ಆಗಿರುವ ಅರಣ್ಯ ನೋಟಿಫಿಕೇಷನ್‌ಗಳಲ್ಲಿ ಪ್ರತಿ ಗ್ರಾಮದ ಸರ್ವೆ ನಂಬರ್‌ಗಳಲ್ಲಿ ಒಂದಷ್ಟು ಎಕರೆ ಅರಣ್ಯ ಎಂದು ನಮೂದಾಗಿದೆ. ಸ್ವಾತಂತ್ರ‍್ಯ ಪೂರ್ವದ ನೋಟಿಫಿಕೇಶನ್‌ಗಳನ್ನು ಈಗ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಸೇರಿಸಿ ಇಲ್ಲಿ ವಾಸವಾಗಿರುವ ಜನರಿಗೆ ಹಕ್ಕುಗಳನ್ನು ನೀಡಲು ಆಗುತ್ತಿಲ್ಲ. 1960 ರಿಂದ ಅನೇಕ ಸಾಗುಳಿ ಪತ್ರಗಳನ್ನು ರೈತರಿಗೆ ನೀಡಿದ್ದು ಅವುಗಳ ಪಕ್ಕಾಪೊಡಿ ಮಾಡಿಸಲು ಹೋದರೆ ಸಾಗುವಳಿ ಪತ್ರ ಇರುವ ರೈತರ ಭೂಮಿಗಳು ಅರಣ್ಯ ಇಲಾಖೆಯ ನಕ್ಷೆಯೊಳಗೆ ಬರುತ್ತಿದೆ. ಕೆಲವು ಸರ್ವೇ ನಂಬರ್ ಗಳನ್ನು ಈಗಾಗಲೇ ಸೆಕ್ಷನ್ 17 ಸಹ ಮಾಡಲಾಗಿದೆ. ಅವುಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಬೇಕಾಗಿದೆ.

ಎಸಿ ಉಮಾಮಹಾದೇವನ್ ಮಾಡಿದ ಆದೇಶದ ಸಂದರ್ಭದಲ್ಲಿ ಸರಿಯಾಗಿ ಬಗರಹುಕುಂ ರೈತರನ್ನು ಗುರುತಿಸದೆ ಅವರು ಸಾಗುವಳಿ ಮಾಡಿದ ಭೂಮಿಗಳನ್ನು ಕೈ ಬಿಟ್ಟು ಅರಣ್ಯ ವ್ಯಾಪ್ತಿಯ ನಕ್ಷೆ ಮಾಡಲಾಗಿದ್ದು ಅದನ್ನು ಮಾಡದೆ ಬಡ ರೈತರನ್ನು ಅತಂತ್ರ ಸ್ಥಿತಿಗೆ ತರಲಾಗಿದೆ ಮತದಾರರು ಜಾತಿವಾದ ಮತ್ತು ಪಕ್ಷ ನೋಡಿ ಮತ ನೀಡುವುದರ ಲಾಭ ತೆಗೆದುಕೊಳ್ಳುವ ಬದಲು ಅವರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಾವು ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸಿ ಮತ ಕೇಳಬೇಕಾಗಿದೆ ರೈತರ ಹೋರಾಟಗಳನ್ನು ಕಡೆಗಣಿಸುತ್ತಾ ಈಗ ರೈತರು ಹೋರಾಟ ಮಾಡಿದರು ಬೆಲೆ ಇಲ್ಲ ಎಂಬ ನಿರಾಸೆಗೆ ಹೋಗಿದ್ದಾರೆ.

ಈಗ ಮತ್ತೆ ನಮಗೆ ಮತ ಹಾಕಿ ಸರಿಪಡಿಸುತ್ತೇವೆ ಎನ್ನುವ ಕಾಂಗ್ರೆಸ್ ಅಭ್ಯರ್ಥಿಯು ತಂದೆಯ ಹೆಸರು ಕೀರ್ತಿಗಳನ್ನು ಮತಗಳನ್ನಾಗಿಸಿಕೊಳ್ಳಲು ಹೊರಟಿದ್ದಾರೆ. ಈಗಲೂ ಮಲೆನಾಡಿನಲ್ಲಿ 36, 37% ಅರಣ್ಯವಿದ್ದು, ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ 3-6% ಅರಣ್ಯವೂ ಇಲ್ಲವಾಗಿದೆ ಅರಣ್ಯ ಬೆಳೆಸಲು ರೈತರಿಗೆ ಅವಕಾಶ ನೀಡಿ ಮಲೆನಾಡಿನಲ್ಲಿ ಹಕ್ಕು ಪತ್ರಗಳನ್ನು ನೀಡಬಹುದಾಗಿದ್ದು, ಈ ಬಗ್ಗೆ ತಾವು ಯಾವುದೇ ಕ್ರಮ ತೆಗೆದುಕೊಂಡಿಲ್ಲವೇಕೆಂದು ಉತ್ತರಿಸಬೇಕಾಗಿದೆ.

ಮಲೆನಾಡಿನ ಒತ್ತುವರಿಗೆ ಸರ್ಕಾರ ನಿರ್ಮಿಸಿದ ಶರಾವತಿ, ವರಾಹಿ, ಚಕ್ರಾ, ಸಾವೆಹಕ್ಕಲು, ತುಂಗಾ, ಭದ್ರಾ, ಜಲ ವಿದ್ಯುತ್ ಯೋಜನೆಗಳೇ ಕಾರಣವಾಗಿದೆ. ಈ ಮೇಲ್ಕಂಡ ಯೋಜನೆಗಳಿಂದ ನಿರಾಶ್ರಿತರಾದ ರೈತರು ಭೂಮಿ ಕಳೆದುಕೊಂಡು ಹೊಸ ಭೂಮಿಗಳನ್ನು ಹುಡುಕಿ ಕೃಷಿ ಮಾಡಿದ್ದಾರೆ. ಇದು ರೈತರ ಬದುಕಿನ ಪ್ರಶ್ನೆಯಾಗಿತ್ತು. ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳದೆ ಈಗ ಮುಳುಗಡೆಯಲ್ಲಿ ಭೂಮಿ ಕಳೆದುಕೊಂಡ ರೈತ ಕುಟುಂಬಗಳೆ ಅರಣ್ಯ ಭೂಮಿ ಒತ್ತುವರಿ ಮಾಡಿದ ಪಟ್ಟಿಯಲ್ಲಿದ್ದು, ಈಗಾಗಲೇ ಅವರುಗಳ ಹೆಸರುಗಳನ್ನು ನ್ಯಾಯಾಲಯಕ್ಕೆ ನೀಡಿರುತ್ತಾರೆ. ಈ ಬಗ್ಗೆ ಕಾಂಗ್ರೆಸ್, ಬಿಜೆಪಿ ಯವರು ತಮ್ಮ ತಮ್ಮ ಅಧಿಕಾರ ಅವಧಿಯಲ್ಲಿ ತೆಗೆದುಕೊಂಡ ಕ್ರಮಗಳನ್ನು ತಿಳಿಸಿ ಮತ ಕೇಳಬೇಕಾಗಿದೆ. ಮಲೆನಾಡಿನ ಒಂದೊಂದು ಗ್ರಾಮದಲ್ಲಿ 400 ರಿಂದ 500 ಮನೆಗಳಿಗೆ ಹಕ್ಕುಪತ್ರ ಇಲ್ಲದೆ ಬರೀ ಮೇಲ್ಮನೆ ಕಂದಾಯ ಮಾತ್ರ ಇದೆ ಆ ಮನೆಗಳಿಗೆ ಹಕ್ಕುಪತ್ರ ನೀಡಲು ಆಗುತ್ತಿಲ್ಲ. ಕಾರಣ ಆ ಎಲ್ಲಾ ಮನೆಗಳು ಅರಣ್ಯ ಇಲಾಖೆ ವ್ಯಾಪ್ತಿಯೊಳಗೆ ಇದೆ. 2005ರಲ್ಲಿ ಬಂದ ಅರಣ್ಯ ಹಕ್ಕು ಕಾಯ್ದೆಯನ್ನು 2012ರಲ್ಲಿ ತಿದ್ದುಪಡಿ ಮಾಡಿದರು ಅದು ರೈತರಿಗೆ ಉಪಯೋಗವಿಲ್ಲದಂತೆ ಆಗಿದೆ. ಜನ ತಮ್ಮ ಸಮಸ್ಯೆಗಳನ್ನು ಹೊತ್ತು ವರ್ಷವಿಡಿ ತಾಲೂಕು ಕಚೇರಿಗಳಲ್ಲಿ ಅಲೆದಾಡುತ್ತಿದ್ದು ನ್ಯಾಯ ಸಿಕ್ಕಿಲ್ಲ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ. ಮತ ಕೇಳಿ ಇವುಗಳ ಸಮಸ್ಯೆ ನೀವು ಬಗೆ ಹರಿಸಿದರೇ ಮಾತ್ರ ನಿಮಗೆ ಮತ ಕೇಳುವ ಹಕ್ಕಿದೆ.

ನೀವು ರೈತರ ಮಲೆನಾಡಿನ ಯಾವ ಭಾಗದವರಿಗೂ ನ್ಯಾಯ ಕೊಡಿಸಿಲ್ಲ ಎಂಬ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೂ ನನಗೆ ಮಲೆನಾಡಿನ ಭಾಗದ ರೈತರ ಜನರ ಬೆಂಬಲವಿದ್ದು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲ್ಲೂ ಅಸಾಧ್ಯವಾದರೂ ಗೆಲ್ಲುತ್ತೇನೆಂಬ ವಿಶ್ವಾಸವಿದೆ ಎಂದರು.

Leave A Reply

Your email address will not be published.

error: Content is protected !!