ಶಿವಮೊಗ್ಗ ಕ್ಷೇತ್ರಕ್ಕೆ 4G ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ ; ಯಾವ ತಾಲೂಕಿಗೆ ಎಷ್ಟು ?

0 65

ಶಿವಮೊಗ್ಗ: ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 4ಜಿ ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ ನೀಡಿದ್ದು, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಯೋಜನೆಯನ್ನು ಕಾರ್ಯಗತಗೊಳಿಸಿ, ಯಶಸ್ವಿಗೊಳಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಸೂಚನೆ ನೀಡಿದರು.

ಶಿವಮೊಗ್ಗ ವಲಯದ ಬಿಎಸ್‌ಎನ್‌ಎಲ್‌ನ ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ, ಎಲ್ಲ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಕಾರ್ಯಗತಗೊಳಿಸಿ, ಯಶಸ್ವಿಗೊಳಿಸಿ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.

ಈಗಾಗಲೇ ಜಿಲ್ಲೆಯ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್. ಸಂಪರ್ಕ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ನೆಟ್‌ವರ್ಕ್‌ ಇಲ್ಲದೇ ಜನಸಾಮಾನ್ಯರಿಗೆ ಆನ್‌ಲೈನ್ ಮೂಲಕ ಹಣದ ವ್ಯವಹಾರ ಮಾಡಲೂ ಸಹ ತೊಂದರೆಯಾಗುತ್ತಿರುವುದರಿಂದ, ಹಾಲಿ ಇರುವ ಟವರ್‌ಗಳಲ್ಲಿಯೂ ಸಹ ಉತ್ತಮ ರೀತಿಯಲ್ಲಿ ನೆಟ್ವರ್ಕ್ ಸಂಪರ್ಕ ದೊರೆಯುವಂತೆ ಮಾಡಲು ತೀವ್ರ ಗಮನಹರಿಸುವಂತೆ ಹಾಗೂ ಗ್ರಾಮಸ್ಥರಿಂದ ಆಕ್ಷೇಪಣೆ ಬಾರದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಒಟ್ಟು 225 ಮೊಬೈಲ್ ಟವರ್‌ಗಳ ಪೈಕಿ, ಸಾಗರ ತಾಲೂಕಿಗೆ 89, ಹೊಸನಗರಕ್ಕೆ 35, ತೀರ್ಥಹಳ್ಳಿಗೆ 27, ಶಿವಮೊಗ್ಗಕ್ಕೆ 18, ಶಿಕಾರಿಪುರಕ್ಕೆ 13, ಭದ್ರಾವತಿ ಹಾಗೂ ಸೊರಬ ತಾಲೂಕಿಗೆ ತಲಾ 8 ಮತ್ತು ಬೈಂದೂರು ಕ್ಷೇತ್ರಕ್ಕೆ 25 ಟವರ್‌ಗಳು ಮಂಜೂರಾಗಿವೆ. ಆರಂಭಿಕ ಮೂರು ಹಂತಗಳಲ್ಲಿ ಶಿವಮೊಗ್ಗ ಜಿಲ್ಲೆಯ 112 ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ಸ್ಥಾಪನೆಗೆ ಅನುಮತಿ ಲಭ್ಯವಾಗಿದ್ದು, ಬಿ.ಎಸ್.ಎನ್.ಎಲ್. ಸಂಸ್ಥೆಯು ಟವರ್ ಸ್ಥಾಪನೆಗೆ ಸೂಕ್ತ ಜಾಗಗಳನ್ನು ಗುರುತಿಸಿದೆ. ಈ ಸಂಬಂಧ ಭೂಮಿ ಹಸ್ತಾಂತರದ ಪ್ರಕ್ರಿಯೆ ಆರಂಭವಾಗಬೇಕಿದೆ. ತಲಾ ಒಂದು ಟವರ್‌ಗೆ ಅಂದಾಜು 75 ಲಕ್ಷ ರೂ.ಗಳಿಂದ 1 ಕೋಟಿವರೆಗೂ ಖರ್ಚಾಗುವ ಸಾಧ್ಯತೆ ಇದ್ದು, ಒಟ್ಟಾರೆ 200 ಕೋಟಿಗೂ ಅಧಿಕ ಮೊತ್ತ ಈ ಕಾಮಗಾರಿಗೆ ಖರ್ಚಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ದೂರ ಸಂಪರ್ಕ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಮತ್ತು ಸುಧಾರಣೆ ದೃಷ್ಟಿಯಿಂದ ಅದರಲ್ಲೂ ದೂರಸಂಪರ್ಕ ವ್ಯವಸ್ಥೆಯಿಂದ ವಂಚಿತವಾದ ನೂರಾರು ಕುಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ತುರ್ತಾಗಿ ದೂರಸಂಪರ್ಕ ವ್ಯವಸ್ಥೆಯನ್ನು ಮತ್ತು ಮೊಬೈಲ್ ಟವರ್ ಸ್ಥಾಪನೆಗೆ ಕಳೆದ 3-4 ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್. ಜೊತೆಯಲ್ಲಿ ಖಾಸಗಿ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳೊಂದಿಗೆ ಕ್ಷೇತ್ರದಲ್ಲಿನ ನೆಟ್‌ವರ್ಕ್ ವಂಚಿತ ಪ್ರದೇಶಗಳಿಗೆ ಮೊಬೈಲ್ ಟವರ್ ಒದಗಿಸುವ ನಿಟ್ಟಿನಲ್ಲಿ ಹಲವಾರು ಬಾರಿ ಸಭೆ ನಡೆಸಿದ್ದರು.

ಕೆಲವು ಕಡೆಗಳಲ್ಲಿ ಖಾಸಗಿ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ ಕಂಪನಿಗಳು ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದರೂ ಸಹ ಕೆಲವು ಕುಗ್ರಾಮಗಳಲ್ಲಿ ಜನವಸತಿ ಕಡಿಮೆ ಇರುವ ಕಾರಣದಿಂದಾಗಿ ಈ ಖಾಸಗಿ ಕಂಪನಿಗಳು ಟವರ್ ನಿರ್ಮಾಣದಲ್ಲಿ ಆಸಕ್ತಿ ತೋರಿರಲಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದಲೇ ಮೊಬೈಲ್ ಟವರ್ ನಿರ್ಮಾಣವನ್ನು ಕೈಗೊಳ್ಳಲು ಕೇಂದ್ರದ ದೂರಸಂಪರ್ಕ ಸಚಿವ ಅಶ್ವಿನಿ ವೃಷ್ಣವ್ ಅವರಿಗೆ ಕಳೆದ ಆ.2ರಂದು 96 ಸ್ಥಳಗಳಲ್ಲಿ ಟವರ್ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿತ್ತು. ನಂತರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ನೆಟ್ ವರ್ಕ್ ಇಲ್ಲದ ಸ್ಥಳಗಳ ವಿವರಗಳನ್ನೂ ಸಹ ಕೇಂದ್ರ ದೂರಸಂಪರ್ಕ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ನನ್ನ ಸತತ ಪ್ರಯತ್ನಕ್ಕೆ ಮನ್ನಣೆ ನೀಡಿದ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣನ್ ಅವರು ಶಿವಮೊಗ್ಗ ಟೆಲಿಕಾಂ ಜಿಲ್ಲೆಗೆ 4ಜಿ ಸ್ಯಾಚುರೇಷನ್ ಯೋಜನೆಯಡಿಯಲ್ಲಿ 198 ಹಾಗೂ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ 27 ಹೊಸ 4G ಟವರ್‌ಗಳಿಗೆ ಒಟ್ಟಾರೆ 225 ಟವರ್ ಗಳಿಗೆ ಮಂಜೂರಾತಿ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ಜಿ.ಎಂ. (ಆಪರೇಷನ್) ವೆಂಕಟೇಶ್, ಸಬ್ ಡಿವಿಜನಲ್ ಎಂಜಿನಿಯರ್‌ಗಳಾದ ರಾಜು, ಜಯಕುಮಾರ್, ಎ.ಜಿ.ಎಂ. (ಆಪರೇಷನ್) ಎನ್. ಬಿ. ಹೆಬ್ಬಾಳ್, ಜೆ.ಟಿ.ಒ. ರಾಘವೇಂದ್ರ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!