ಶಿವಮೊಗ್ಗ ಜೆಡಿಎಸ್ ನಗರಾಧ್ಯಕ್ಷರಾಗಿ ದೀಪಕ್ ಸಿಂಗ್ ಅಧಿಕಾರ ಸ್ವೀಕಾರ | ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜನರ ಕಲ್ಯಾಣವನ್ನೇ ಮರೆತಿದೆ‌ – ಕೆಬಿಪಿ

0 336

ಶಿವಮೊಗ್ಗ: ಜೆಡಿಎಸ್ (JDS) ನಗರಾಧ್ಯಕ್ಷರಾಗಿ ದೀಪಕ್ ಸಿಂಗ್ ಇಂದು ಅಧಿಕಾರ ಸ್ವೀಕರಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್, ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ (Congress) ಸರ್ಕಾರ ಜನರ ಕಲ್ಯಾಣವನ್ನೇ ಮರೆತಿದೆ. ಗ್ಯಾರಂಟಿ ಯೋಜನೆಗಳೆಲ್ಲ ವಿಫಲವಾಗಿವೆ. ಅಧಿಕಾರಿಗಳು ಕೂಡ ಕೆಲಸ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ (Shivamogga) ಬಡವರಿಗೆ ಒಂದು ಮನೆಯೂ ನಿರ್ಮಣವಾಗಿಲ್ಲ. ಆಶ್ರಯ ಮನೆಗಾಗಿ ಹಣ ಕಟ್ಟಿ ಕಾಯುತ್ತಿರುವವರು ಸಂಕಟ ಅನುಭವಿಸುತ್ತಿದ್ದಾರೆ ಎಂದರು.

ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಆದರೆ, ಭಯೋತ್ಪಾದಕರಿಗೆ ಶಿಕ್ಷೆ ಕೊಡಿಸಬೇಕಾದುದು ಸರ್ಕಾರದ ಕೆಲಸವಾಗಿದೆ. ಸರ್ಕಾರ ತಿದ್ದುವ ಕೆಲಸ ವಿರೋಧ ಪಕ್ಷಗಳದ್ದು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಶಿವಮೊಗ್ಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಮಾತನಾಡಿಸುವಂತೆಯೇ ಇಲ್ಲ. ಯಾವ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನಿಗಮ ಮಂಡಳಿಗಳತ್ತ ನೋಡುತ್ತಿದ್ದಾರೆ ವಿನಃ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದರು‌

ಪಾಲಿಕೆ ಅಧಿಕಾರಿಗಳು ತುಂಗಾ ನದಿಗೆ ಚರಂಡಿ ನೀರು ಸೇರುತ್ತಿದ್ದರೂ ಕಣ್ಮುಚ್ಚಿ ಕುಳಿತು ಜನರಿಗೆ ಶುದ್ಧ ನೀರು ಪೂರೈಸುವಲ್ಲಿ ವಿಫಲರಾಗಿದ್ದಾರೆ. ನಗರದಲ್ಲಿ ಹಲವಾರು ಕಾಯಿಲೆಗಳಿಂದ ಜನ ನರಳುತ್ತಿದ್ದರೂ ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಇತ್ತ ಕಡೆ ಗಮನಹರಿಸುತ್ತಿಲ್ಲ. ಇದರ ವಿರುದ್ಧ ನಗರ ಜೆಡಿಎಸ್ ಹೋರಾಟ ನಡೆಸಬೇಕಾಗಿದೆ. ಹಾಗೂ ಬಡವರ ಶೋಷಿತರ ಪರ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ದೀಪಕ್ ಸಿಂಗ್ ನಗರ ಅಧ್ಯಕ್ಷರಾಗಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಅವರ ನೇತೃತ್ವದಲ್ಲಿ ಜನರ ಸಮಸ್ಯೆಗಳನ್ನು ಅರಿತುಕೊಂಡು ಅವರ ಪರವಾಗಿ ಧ್ವನಿ ಎತ್ತುತ್ತೇವೆ. ಜೆಡಿಎಸ್ ಪಕ್ಷವೇ ಬಡವರ ಉದ್ಧಾರ ಮಾಡುವ ಪಕ್ಷವಾಗಿದೆ. ಶಿವಮೊಗ್ಗದಲ್ಲಿ ಮತ್ತಷ್ಟು ಸಂಘಟನೆ ಮಾಡಿ ಪಕ್ಷ ಗಟ್ಟಿಗೊಳಿಸುತ್ತೇವೆ ಎಂದರು.

ಅಧಿಕಾರ ಸ್ವೀಕರಿಸಿದ ದೀಪಕ್ ಸಿಂಗ್ ಮಾತನಾಡಿ, ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು. ನಗರದ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ನ್ಯಾಯ ಒದಗಿಸಿಕೊಡಲಾಗುವುದು. ಪ್ರತಿಪಕ್ಷವಾಗಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಹೋರಾಟ ನಡೆಸಲಾಗುವುದು. ಪಕ್ಷದ ವರಿಷ್ಠರು ಜವಾಬ್ದಾರಿ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಕೆ.ಎನ್. ರಾಮಕೃಷ್ಣ, ಗೋವಿಂದಪ್ಪ, ಬೊಮ್ಮನಕಟ್ಟೆ ಮಂಜುನಾಥ್, ಸಿದ್ದಪ್ಪ, ಗೀತಾ ಸತೀಶ್, ಎಸ್.ವಿ. ರಾಜಮ್ಮ, ಪುಷ್ಪಾ, ನಾಗೇಶ್, ರೇಷ್ಮಾ, ಅಬ್ದುಲ್ ವಾಜಿದ್, ಹೆಚ್.ಎನ್. ಸಂಗಯ್ಯ, ಉಷಾ ನಾಯಕ್, ಆಯನೂರು ಶಿವಾನಾಯ್ಕ್, ರಮೇಶ್ ನಾಯಕ್, ಶಾಮು ಇನ್ನಿತರರು ಉಪಸ್ಥಿತರಿದ್ದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ವಿನಯ್ ಸ್ವಾಗತಿಸಿದರು. ತ್ಯಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನರಸಿಂಹ ಗಂಧದಮನೆ ನಿರೂಪಿಸಿದರು.

Leave A Reply

Your email address will not be published.

error: Content is protected !!