ಹೊಸನಗರದಲ್ಲಿ ಫೆ.6 ರಿಂದ 14ರವರೆಗೆ ಅದ್ದೂರಿ ಶ್ರಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ | ದೇವಸ್ಥಾನ ಸಮಿತಿಯಿಂದ ತಹಶೀಲ್ದಾರ್‌ಗೆ ಆಹ್ವಾನ

0 735

ಹೊಸನಗರ: ಪಟ್ಟಣದಲ್ಲಿ ಫೆ.6 ಮಂಗಳವಾರದಿಂದ ಫೆ.14ರ ಬುಧವಾರವರೆಗೆ ಅದ್ದೂರಿಯಾಗಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು ತಹಶೀಲ್ದಾರ್ ರಶ್ಮಿಯವರಿಗೆ ಅಧಿಕೃತ ಆಹ್ವಾನ ಪತ್ರಿಕೆಯನ್ನು ಜಾತ್ರಾ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಹಾಗೂ ಜಾತ್ರಾ ಕಮಿಟಿಯ ಪದಾಧಿಕಾರಿಗಳು ನೀಡಿದರು.

ಫೆ‌. 6ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದಿಂದ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಶಿವಪ್ಪನಾಯಕ ರಸ್ತೆಯ ಮೂಲಕ ಅಮ್ಮನವರ ತಾಯಿ ಮನೆ ಎನಿಸಿಕೊಂಡಿರುವ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ನಂತರ 10 ಗಂಟೆಯಿಂದ ಪೂಜಾ ಕಾರ್ಯ ನೆರವೇರಲಿದ್ದು ಅದೇ ದಿನ ರಾತ್ರಿ 11 ಗಂಟೆಯವರೆಗೆ ಸಾರ್ವಜನಿಕರು ಹಣ್ಣು-ಕಾಯಿ ಪೂಜೆಯ ಜೊತೆಗೆ ವಿವಿಧ ಹರಕೆಯನ್ನು ಸಲ್ಲಿಸುವರು.

ಮಧ್ಯಾಹ್ನ ಸ್ನೇಹ ಬಳಗದವರಿಂದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಗಿದ್ದು ಈ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ನಡೆಯುವ ಒಂದು ದಿನದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿ ಈ ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ದುರ್ಗಾಂಬಾ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಶ್ರೀಪತಿರಾವ್ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿ ಸದಸ್ಯರು ಈ ಮೂಲಕ ಕೇಳಿಕೊಂಡಿದ್ದಾರೆ.

ಫೆ. 7ರ ಬುಧವಾರದಿಂದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ 8 ದಿನಗಳ ಮಾರಿಜಾತ್ರೆ ಶಿವಮೊಗ್ಗ ರಸ್ತೆಯಲ್ಲಿರುವ ಮಾರಿಗುಡ್ಡದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿ ದುರ್ಗಾಂಬಾ ದೇವಸ್ಥಾನದಿಂದ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದ ಮಾರಿಕಾಂಬೆಯನ್ನು ಬುಧವಾರ ಬೆಳಿಗ್ಗೆ ಪ್ರತಿಷ್ಠಾಪಿಸಿ 8 ದಿನಗಳ ಕಾಲ ಇಲ್ಲಿ ಪೂಜೆ ನಡೆಸಲಾಗುವುದು.

8 ದಿನಗಳ ಕಾಲ ವಿವಿಧ ಮನರಂಜನೆಗಳು:
ಪ್ರತಿದಿನ ರಾತ್ರಿ 8:30ರಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಫೆ. 9ರಂದು ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ನಗೆ ನಾಟಕ ಅಪ್ಪ, ಫೆ. 10ರಂದು ಶನಿವಾರ ಸೋನಿ ಮೆಲೋಡೀಸ್ ಭದ್ರಾವತಿಯವರಿಂದ ಆರ್ಕೆಸ್ಟ್ರಾ, ಫೆ. 11 ರ ಭಾನುವಾರ ಮ್ಯೂಸಿಕಲ್ ನೈಟ್ ಹಾಗೂ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ಫೆ‌. 12ರ ಸೋಮವಾರ ಡಿಸ್ನಿ ಡ್ಯಾನ್ಸ್ ಕೊಪ್ಪ ಇವರಿಂದ ಆಕರ್ಷಕ ನೃತ್ಯ ಕಾರ್ಯಕ್ರಮ, 13ರ ಮಂಗಳವಾರ ರೂಪಕಲಾ (ಕುಳ್ಳಪ್ಪು) ತಂಡದವರಿಂದ ‘ಗಿರಾಕಿಯೇ ಇಲ್ಲಾ ಮಾರಾಯ’ ಎಂಬ ನಗೆ ನಾಟಕ, ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಈ ಎಲ್ಲ ಕಾರ್ಯಕ್ರಮಗಳು ರಾತ್ರಿ 9ಗಂಟೆಯಿಂದ ಪ್ರಾರಂಭವಾಗಲಿದ್ದು ದೇವಿಯ ಭಕ್ತಾರು ಹಾಗೂ ಸಾರ್ವಜನಿಕರು ಆಗಮಿಸಿ ಈ 9 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮಾರಿಕಾಂಬಾ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿ ಸದಸ್ಯರು ಈ ಮೂಲಕ ಕೇಳಿಕೊಂಡಿದ್ದಾರೆ.

ತಹಶೀಲ್ದಾರ್ ರಶ್ಮಿಯವರಿಗೆ ಆಹ್ವಾನ ಪತ್ರಿಕೆ ನೀಡುವ ಸಂದರ್ಭದಲ್ಲಿ ಜಾತ್ರ ಕಮಿಟಿಯ ಕಾರ್ಯದರ್ಶಿ ಟಿ.ಆರ್. ಸುನೀಲ್‌ಕುಮಾರ್, ಖಜಾಂಚಿ ಪಿ ಮನೋಹರ, ಪಟ್ಟಣ ಪಂಚಾಯತಿ ಸದಸ್ಯ ಆರ್ ಗುರುರಾಜ್, ಸದಸ್ಯ ಗಿರೀಶ್ ಹೆಚ್.ಎಸ್, ಗುರುರಾಜ್ ಕುಮಾರ ಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!