ಪ್ರಭುತ್ವ ಮತ್ತು ಸಾಹಿತ್ಯದ ನಡುವೆ ತಿಕ್ಕಾಟಗಳು ನಡೆಯುತ್ತಿದ್ದು ಇದಕ್ಕೆ ತಿಲಾಂಜಲಿ ಹಾಡಬೇಕಾಗಿದೆ

0 80

ಶಿವಮೊಗ್ಗ: ಪ್ರಭುತ್ವ ಮತ್ತು ಸಾಹಿತ್ಯದ ನಡುವೆ ತಿಕ್ಕಾಟಗಳು ನಡೆಯುತ್ತಿದ್ದು, ಇದಕ್ಕೆ ತಿಲಾಂಜಲಿ ಹಾಡಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ.ಎಲ್.ಎನ್.ಮುಕುಂದರಾಜ್ ಹೇಳಿದರು.
ಅವರು ಇಂದು 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪ್ರಭುತ್ವವನ್ನು ಹೆಗಲ ಮೇಲೆ ಹೊತ್ತು ಕೂರುವ ಅವಶ್ಯಕತೆ ಇಲ್ಲ. ನಮ್ಮ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಸಂಘರ್ಷವನ್ನು ತರುತ್ತಾರೆ. ರಾಜಕಾರಣಿಗಳಿಗೆ ಈ ದೇಶ ಸುಭೀಕ್ಷಾವಾಗಿರುವುದು ಇಷ್ಟವಿರುವುದಿಲ್ಲ. ಸಂವಿಧಾನವನ್ನು ಬಿಟ್ಟು ದೇವರು, ಧರ್ಮ, ಜಾತಿ, ಕೋಮುವಾದಗಳನ್ನು ನಡುವೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.

ಪೋಷಕರು ತಮ್ಮ ಮಕ್ಕಳನ್ನು ಕೋಮುವಾದ ರಾಜಕಾರಣಕ್ಕೆ ಬಲಿಕೊಡಬಾರದು. ಆದರೆ ಅಂತದೊAದು ನಿರಂತರವಾದ ಪ್ರಯತ್ನ ನಡೆಯುತ್ತಲೇ ಇದೆ. ಕುವೆಂಪುರವರು ಎಲ್ಲಾ ದೇವರುಗಳನ್ನು ನೂಕಾಚೆ ಎಂದಿದ್ದಾರೆ. ಅಂದರೆ ಸರ್ವರಿಗೂ ಪ್ರಿಯವಾಗುವ ಭಾರತಾಂಬೆಯೇ ದೇವರು ಎಂದು ಅವರು ಕರೆಯುತ್ತಾರೆ. ಆಗ ಮಾತ್ರ ಈ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಭಜನೆ ಮಾಡುವವರು ಜಾಸ್ತಿಯಾದರೆ, ಸೃಜನಶೀಲತೆಯೇ ಹೊರಟುಹೋಗುತ್ತದೆ. ಅದು ಯಾವ ರೀತಿಯ ಭಜನೆಯಾದರೂ ಆಗಬಹುದು. ಈ ರಾಜಕಾರಣಿಗಳಿಗೆ ಕವಿಗಳ ಬಗ್ಗೆ ಗೌರವವಿಲ್ಲ, ಏಕೆಂದರೆ ಕವಿಗಳೂ ಭಜನೆ ಮಾಡುವುದಿಲ್ಲ. ಸತ್ಯ ಹೇಳುತ್ತಾರೆ. ಆದ್ದರಿಂದ ಈ ಎಲ್ಲಾ ತಲ್ಲಣಗಳಿಂದ ಜನರು ದೂರವಿರಬೇಕು. ಪ್ರೀತಿ ವಿಶ್ವಾಸಗಳೇ ನಮ್ಮ ಜೀವನವನ್ನು ರೂಪಿಸುತ್ತವೆ. ಬೇರೆ ಧರ್ಮಗಳನ್ನು ಪ್ರೀತಿಸುವುದು ನಮ್ಮ ಕನ್ನಡಿಗರ ಗುಣ. ರಾಜಕಾರಣಿಗಳ ಕರೆಗಳಿಗೆ ಕನ್ನಡಿಗರು ಗೌರವ ಕೊಡಬಾರದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪ ಜಿಲ್ಲಾಧ್ಯಕ್ಷ ಸಾಹಿತ್ಯ ಕ್ರಮಗಳಿಂದ ರಾಜಕಾರಣಿಗಳು ದೂರವಿರುತ್ತಾರೆ. ಸಾಹಿತ್ಯ ವೆಂದರೇ, ಅವರಿಗೆ ಅಸಡ್ಡೆಯಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಯಾವ ರಾಜಕಾರಣಿಗಳು ಬಂದಿಲ್ಲ. ಆರ್.ಎಂ.ಮಂಜುನಾಥ್‌ಗೌಡರೇ ನಮಗೆ ರಾಜಕಾರಣಿಯಾಗಿದ್ದಾರೆ. ನಮ್ಮ ಕೆಲವು ಬೇಡಿಕೆಗಳನ್ನು ಅವರೇ ಸರ್ಕಾರಕ್ಕೆ ಮುಟ್ಟಿಸಬೇಕು ಎಂದರು.

ಸಾಹಿತ್ಯ ಗ್ರಾಮ ಸುಮಾರು 1ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದು ನಿರ್ಮಾಣವಾಗಲು ತುಂಬ ಕಷ್ಟಪಡಬೇಕಾಯಿತು. ಅನೇಕರು ಕೆಲವು ದೂರುಗಳನ್ನು ಹೇಳಿದರು. ಆದರೆ, ಇದರ ನಿರ್ಮಾಣದ ಕಷ್ಟ ನಮಗೆ ಗೊತ್ತು. ಇದಕ್ಕೆ ಇನ್ನೂ 2.5ಕೋಟಿ ರೂ. ಹಣ ಬೇಕಾಗಿದೆ. ಸರ್ಕಾರ ಸಹಾಯಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮೇಳಾನಾಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಸಮ್ಮೇಳಾನಾಧ್ಯಕ್ಷ ಡಾ. ಎಸ್.ಪಿ. ಪದ್ಮಾಪ್ರಸಾದ್ ಅವರಿಗೆ ಧ್ವಜ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಲಾಡಿ ಪ್ರಮುಖರಾದ ಆಂಜನಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಡಾ.ಕೆ.ಆರ್. ಶ್ರೀಧರ್, ಶಂಕರನಾಯ್ಕ, ಹುಚ್ರಾಯಪ್ಪ, ಸ್ವಾಮಿ, ಗಣೇಶ್, ರಘು, ರಮೇಶ್‌ಶಟ್ಟಿ, ನವೀನ್‌ಕುಮಾರ್ ಹಾಗೂ ಕ.ಸಾ.ಪ. ದ ಎಲ್ಲಾ ಪದಾಧಿಕಾರಿಗಳು, ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು. ನೃಪತುಂಗ ನಿರೂಪಿಸಿದರು. ಮಹಾದೇವಿ ಸ್ವಾಗತಿಸಿದರು.

ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷರನ್ನು ಗೋಪಾಳದ ಆನೆ ಪ್ರತಿಮೆ ವೃತ್ತದಿಂದ ಸಾಹಿತ್ಯ ಗ್ರಾಮದವರಿಗೆ ಜನಪದ ಕಲಾ ತಂಡದೊಂದಿಗೆ ರಾಜ ಬೀದಿ ಉತ್ಸವ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು

ಕನ್ನಡವನ್ನು ದುರ್ಬಲಗೊಳಿಸುವಲ್ಲಿ ಕನ್ನಡಿಗರ ಪಾತ್ರವೂ ಇದೆ ; ಡಾ. ಎಸ್.ಪಿ. ಪದ್ಮಪ್ರಸಾದ್

ಕನ್ನಡವನ್ನು ದುರ್ಬಲಗೊಳಿಸುವಲ್ಲಿ ಕನ್ನಡಿಗರ ಪಾತ್ರವೂ ಇದೆ. ಇದರಿಂದಲೇ ಕನ್ನಡ ಶಾಲೆಗಳು ಸೊರಗಿವೆ ಎಂದು ಶಿವಮೊಗ್ಗ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಸ್.ಪಿ. ಪದ್ಮಪ್ರಸಾದ್ ವಿಷಾದ ವ್ಯಕ್ತಪಡಿಸಿದರು.


ಅವರು ಇಂದು ಜಿಲ್ಲಾ ಕ.ಸಾ.ಪ.ವತಿಯಿಂದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಿರುವ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿ, ಇಂಗ್ಲಿಷ್ ಮಾಧ್ಯಮನದಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ಎಂಬ ಭ್ರಮೆಯಲ್ಲಿ ಪೋಷಕರಿದ್ದಾರೆ. ಇದರಿಂದಾಗಿ ಕನ್ನಡ ಶಾಲೆಗಳು ಸೊರಗುತ್ತಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 43 ಕನ್ನಡ ಶಾಲೆಗಳು ಮುಚ್ಚಿ ಹೋಗಿವೆ. ಇದು ಅತ್ಯಂತ ವಿಷಾಧದ ಸಂಗತಿಯಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಈ ಬಗ್ಗೆ ಮನವಿ ಮಾಡಿದ್ದಾರೆ ನಿಜ. ಆದರೆ, ಇಲಾಖೆಯವರು ಯಾರನ್ನು ಬಲವಂತ ಮಾಡಲು ಬರುವುದಿಲ್ಲ. ಹೀಗೆಯೇ ರಾಜ್ಯಾದದ್ಯಾಂತ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ ಎಂದ ಅವರು, ಇದರ ನಡುವೆಯೂ ಸರ್ಕಾರಿ ಶಾಲೆಗಳ ಉನ್ನತೀಕರಣ ಆಗುತ್ತಿರುವುದು ಸಮಾಧಾನದ ವಿಷಯ ಎಂದರು.


ಕರ್ನಾಟಕದ ವಿವಿಧ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶಗಳನ್ನು ನೀಡಬೇಕು ಎಂದು ಡಾ.ಸರೋಜಿನಿ ಮಹಿಷಿ ವರದಿ ಪ್ರಕಟವಾಗಿ 40 ವರ್ಷಗಳಾದರೂ ಕೂಡ ಅದು ಈಡೇರಿಲ್ಲ. ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ಇಲ್ಲವಾಗಿದೆ. ಇದು ನಮ್ಮ ವ್ಯವಸ್ಥೆಯ ಮತ್ತೊಂದು ರೂಪ. ಕಾನೂನುಗಳು ಬಲವಾಗಿ ಜಾರಿಯಾದರೆ ಮಾತ್ರ ಕನ್ನಡಿಗರಿಗೆ ಉದ್ಯೋಗ ಸಿಗಲು ಸಾಧ್ಯ ಎಂದರು.


ಪಾಂಡಿತ್ಯ ಪ್ರತಿಭೆ ಎನ್ನುವುದು  ದಿನದಿನಕ್ಕೂ ಕ್ಷೀಣಿಸುತ್ತಿದೆ. ಇತಿಹಾಸವನ್ನು ನಾವು ಮರೆಯುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆ ಹಳೆಗನ್ನಡ, ಛಂದಸ್ಸು, ವ್ಯಾಕರಣ, ಶಾಸನ ಶಾಸ್ತ್ರ ಹೀಗೆ ಹಲವು ವಿಷಯಗಳನ್ನು ಮರೆತು ಬಿಟ್ಟಿದೆ. ಪರ ಭಾಷೆಗಳ ಮುನ್ನುಗ್ಗುವಿಕೆ, ಶಿಕ್ಷಕರ ನಿರ್ಲಕ್ಷ್ಯ, ಕನ್ನಡ ಮಾಧ್ಯಮದ ಪೋಷಕರ ಅನಾಧರ ಇವೆಲ್ಲವೂ ಕನ್ನಡಕ್ಕೆ ಶಕ್ತಿ ತುಂಬಲು ಸಾಧ್ಯವಿಲ್ಲವಾಗಿದೆ. ಕನ್ನಡವೇ ನಮ್ಮ ಅಸ್ಮಿತೆ ಆದರೆ, ಅದರ ಅನಾಧರ ಸಲ್ಲದು ಎಂದರು.


ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಶರಾವತಿ ಸೇರಿದಂತೆ ಮುಳುಗಡೆ ಸಂತ್ರಸ್ಥರ ಬದುಕು ಇನ್ನು ನೆಟ್ಟಗೆ ಆಗಿಲ್ಲ. ಅಡಿಕೆಗೆ ಕೊಳೆ ರೋಗ ಪದೇ ಪದೇ ಬಾದಿಸುತ್ತಿದೆ. ಕ್ಯಾಸನೂರು (ಮಂಗನ) ಕಾಯಿಲೆ ಮತ್ತೆ ಮರುಕಳಿಸಿದೆ. ಜಿಲ್ಲೆಯಾದ್ಯಂತ ಸಮಸ್ಯೆಗಳಿವೆ, ಈ ಸಮಸ್ಯೆಗಳಿಗೆ ಉತ್ತರ ಸಿಗಬೇಕಾಗಿದೆ. ಇದರ ನಡುವೆಯೂ ಒಂದಿಷ್ಟು ಪ್ರಗತಿಪರ ಕೆಲಸಗಳು ಆಗಿವೆ, ಕಾಲೇಜುಗಳ ಸಂಖ್ಯೆ ಹೆಚ್ಚಿದೆ, ರಸ್ತೆಗಳ ಸ್ಥಿತಿ ಉತ್ತಮಗೊಂಡಿದೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುತ್ತಿದೆ ಎಂಬುದಷ್ಟೇ ಸಮಾಧಾನ ಎಂದರು.

Leave A Reply

Your email address will not be published.

error: Content is protected !!