ಹೊಸನಗರ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಿ ; ದಸಂಸ ಒತ್ತಾಯ

0 763

ಹೊಸನಗರ : ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಮದ್ಯ ಮಾರಾಟ, ಮರಳು ಸಾಗಾಣಿಕೆ, ಭೂ ಮಾಫಿಯಾ ಸೇರಿದಂತೆ ವಿವಿಧ ಅಕ್ರಮ ದಂಧೆಗಳಿಗೆ ಕೂಡಲೇ ಸರ್ಕಾರ ನಿಯಂತ್ರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ತಹಶೀಲ್ದಾರ್ ರಶ್ಮಿ ಹಾಲೇಶ್ ಮೂಲಕ ಮನವಿ ಸಲ್ಲಿಸಿದರು.

ಈ ವೇಳೆ ಸಮಿತಿಯ ಜಿಲ್ಲಾ ಸಂಚಾಲಯ ಕೆ.ವಿ.ನಾಗರಾಜ್ ಅರಳಸುರಳಿ ಮಾತನಾಡಿ, ತಾಲೂಕಿನಲ್ಲಿ ಅಕ್ರಮವಾಗಿ ಮರಳು ರ‍್ಯಾಂಪ್ ನಿರ್ಮಿಸಿ ಅಹೋರಾತ್ರಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವ ದಂಧಗೆ ಕೂಡಲೇ ಕಡಿವಾಣ ಹಾಕಬೇಕು. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವ, ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಜನ-ಜಾನುವಾರು, ಪ್ರಾಣಿ-ಪಕ್ಷಿ ಸಂಕುಲಕ್ಕೆ ಕುಡಿಯವ ನೀರಿನ ಬವಣೆ ಸೃಷ್ಠಿಗೆ ಕಾರಣ ಆಗುವ ಅಕ್ರಮ ಮರಳು ದಂಧೆಯನ್ನು ಕೂಡಲೇ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಮಸಗಲ್ಲಿ, ಮಾರಿಗುಡ್ಡ, ಸುತ್ತಾ, ಮಳಲಿ ಮುಂತಾದ ಕಡೆಗಳಲ್ಲಿ ಜನವಸತಿ ಪ್ರದೇಶಕ್ಕೆ ಹತ್ತಿರದಲ್ಲೇ ಕಲ್ಲು ಕ್ವಾರಿಗಳ ಭಾರಿ ಸ್ಫೋಟಕ್ಕೆ ಹಲವಾರು ವಾಸಿಸುವ ಮನೆಗಳು ಜಖಂಗೊಂಡಿದ್ದು, ಚಿಣ್ಣರು, ಗರ್ಭಿಣಿಯರು, ವಯೋವೃದ್ದರಿಗೆ ಮಾನಸಿಕ ಹಾಗೂ ದೈಹಿಕವಾಗಿ ಬಳಲುವಂತಾಗಿದೆ. ಸರ್ಕಾರಕ್ಕೆ ಗಣಿ ಮಾಲೀಕರಿಂದ ನಿರಂತರ ವಂಚನೆ ನಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.

ತಾಲೂಕಿನಾದ್ಯಂತ ನಿರಂತರವಾಗಿ ಅಕ್ರಮ ಮದ್ಯ ಮಾರಾಟ, ಸಾಗಾಟ ದಂಧೆ ನಡೆಯುತ್ತಿದೆ ಎಂಬುದಾಗಿ ದಲಿತ ಸಂಘರ್ಷ ಸಮಿತಿ ಹಲವು ಬಾರಿ ದೂರು ನೀಡಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮದ್ಯ ವ್ಯಸನಿಗಳು ಕುಟುಂಬ ನಿರ್ವಹಣೆಯಲ್ಲಿ ಕೈಚೆಲ್ಲಿ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಮದ್ಯದಂಗಡಿ ಮಾಲೀಕರೇ ತಾಲೂಕಿನ ಪ್ರತಿ ಹಳ್ಳಿಗಳಿಗೂ ಸ್ವಯಂ ಮದ್ಯ ಸರಬರಾಜಿಗೆ ಮುಂದಾಗುತ್ತಿರುವ ದೂರುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಅಬಕಾರಿ ಇಲಾಖೆ ಈ ಕುರಿತು ಸೂಕ್ತ ಕ್ರಮಕ್ಕೆ ಸಮಿತಿ ಅಗ್ರಹಿಸುತ್ತಿದೆ ಎಂದರು.

ಈ ವೇಳೆ ಸಮಿತಯ ತಾಲೂಕು ಸಂಚಾಲಕರಾದ ಬಿ.ಎಂ. ಪ್ರಕಾಶ್, ಗುರುಪರಸಾದ್ ಜಯನಗರ, ಹರೀಶ್ ಗಂಗನಕೊಪ್ಪ, ಸುಬ್ರಹ್ಮಣ್ಯ ಇದ್ದರು.

Leave A Reply

Your email address will not be published.

error: Content is protected !!