Hosanagara | ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಹಾವು ಪತ್ತೆ

0 2,307

ಹೊಸನಗರ : ಇಲ್ಲಿನ ಹೋಲಿ ರೆಡೀಮ‌ರ್ ಪ್ರೌಢಶಾಲೆಗೆ ಮುಂಬಾರು ಗ್ರಾಪಂ ವ್ಯಾಪ್ತಿಯ ಸಾವಂತೂರು ಗ್ರಾಮದಿಂದ ಬರುವ ಭಾವನಾ ಎಂಬ ವಿದ್ಯಾರ್ಥಿನಿಯ ಶಾಲಾ ಬ್ಯಾಗ್‌ನ ಒಳಗೆ ಕಾಡು ಜಾತಿಯ ಹಾವೊಂದು ಗುರುವಾರ ಪತ್ತೆಯಾಗಿದೆ.

ಬೆಳಗ್ಗೆ 10 ಗಂಟೆಗೆ ಶಾಲೆ ಆರಂಭವಾದರೂ ಮಧ್ಯಾಹ್ನ 1 ಗಂಟೆವರೆಗೂ ಬ್ಯಾಗ್‌ನಲ್ಲಿ ಹಾವು ಇರುವುದು ವಿದ್ಯಾರ್ಥಿನಿಯ ಗಮನಕ್ಕೆ ಬಂದಿರಲಿಲ್ಲ. ಹಲವು ಬಾರಿ ಬ್ಯಾಗ್‌ನ ಒಳಗೆ ಕೈ ಹಾಕಿ ಪುಸ್ತಕ, ಪೆನ್ನುಗಳನ್ನು ತೆಗೆದುಕೊಂಡಿದ್ದಾಳೆ. ಮಧ್ಯಾಹ್ನದ ವೇಳೆ ಒಳಗಿರುವ ಹಾವನ್ನು ನೋಡಿ, ಭಯಗೊಂಡು ತಕ್ಷಣ ತನ್ನ ಸ್ನೇಹಿತೆ ಪಕ್ಕದ ವಿದ್ಯಾರ್ಥಿನಿಗೆ ತಿಳಿಸಿದ್ದಾಳೆ. ಆ ವಿದ್ಯಾರ್ಥಿನಿ ಹಾವು ಇದೆ ಎಂದು ಸುಮ್ಮನೆ ತಮಾಷೆ ಮಾಡುತ್ತೀಯಾ? ಎಂದು ಬ್ಯಾಗ್‌ನೊಳಗೆ ಕೈ ಹಾಕಿ ಪುಸ್ತಕ ತೆಗೆಯಲು ಪ್ರಯತ್ನಿಸಿದ್ದಾಳೆ. ಈ ಸಂದರ್ಭದಲ್ಲಿ ಕೈ ಹಾವಿನ ಬಾಲ ಸ್ಪರ್ಶಿಸಿದೆ.

ಇಬ್ಬರು ವಿದ್ಯಾರ್ಥಿನಿಯರಿಗೂ ಹಾವು ಯಾವುದೇ ತೊಂದರೆ ಮಾಡಿಲ್ಲ. ತತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ಗಮನಕ್ಕೆ ತಂದಾಗ, ಅವರು ಶಾಲೆಗೆ ಆಗಮಿಸಿ ಇಬ್ಬರು ವಿದ್ಯಾರ್ಥಿನಿಯರನ್ನು ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಮನೆಯಿಂದ ಶಾಲೆಗೆ ಬರುವ ಮುನ್ನ ಮಕ್ಕಳು ಬ್ಯಾಗ್ ಮತ್ತು ಶೂ ಧರಿಸುವ ಮುನ್ನ ಪರಿಶೀಲಿಸಿಕೊಂಡು ಶಾಲೆಗೆ ಬರುವುದು ಒಳಿತು. ಮಲೆನಾಡ ಪರಿಸರವಾಗಿರುವುದರಿಂದ ಹಲವು ಬಗೆಯ ಹಾವುಗಳು ಮನೆ ಸುತ್ತಮುತ್ತ ವಾಸಿಸುತ್ತವೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು.
– ಹೆಚ್.ಆರ್. ಕೃಷ್ಣಮೂರ್ತಿ, ಹೊಸನಗರ ಬಿಇಓ

Leave A Reply

Your email address will not be published.

error: Content is protected !!