Ripponpet | ಅಕ್ರಮ ಮರಳು ದಂಧೆ ; ಕ್ರಮ ಜರುಗಿಸಲು ಹಿಂದೆ-ಮುಂದೆ ನೋಡುತ್ತಿರುವ ಅಧಿಕಾರಿಗಳು

0 1,624

ರಿಪ್ಪನ್‌ಪೇಟೆ: ಮಳೆ ಕೊರತೆಯಲ್ಲೂ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ಎಗ್ಗಿಲ್ಲದೆ ಶರಾವತಿ ಉಪ ನದಿಗಳಾದ ಶರ್ಮಿಣ್ಯಾವತಿ ನಂದಿಹೊಳೆ, ಮಾವಿನಹೊಳೆ ಕೊಂಬಿನಹೊಳೆಗಳಲ್ಲಿ ಮರಳು ಮಾಫಿಯಾ ದಂಧೆಯಾಗಿದ್ದು ಹೆಚ್ಚಿನ ಆದಾಯ ಸಿಗುವುದರಿಂದ ಸಾಕಷ್ಟು ಜನ ಇದ್ದನೇ ತಮ್ಮ ಕಸಬುನ್ನಾಗಿಸಿಕೊಂಡಿದ್ದು ಪೊಲೀಸ್ ಇಲಾಖೆಯವರಾಗಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಿಬ್ಬಂದಿ ಇದುವರೆಗೂ ಇತ್ತ ತಲೆ ಹಾಕದೇ ಕಣ್ಮುಚ್ಚಿಕೊಂಡ ಕುಳಿತ್ತಿದ್ದಾರೆಂದು ಪರಿಸರ ವೇದಿಕೆಯ ಸಾಮಾಜಿಕ ಕಾರ್ಯಕರ್ತ ದಾಮೋಧರ್ ಆರೋಪಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದರೊಂದಿಗೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ವಿವರಿಸಿದರು.

ಚಿಕ್ಕಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುತ್ತಲ, ನಂಜವಳ್ಳಿ, ಕೊಂಬಿನಹಳ್ಳ ಪುಟ್ಟಸ್ವಾಮಿಗೌಡರ ಮನೆ ಹತ್ತಿರ ಮಾಕೋಡು, ಮೈಥೆ, ಮಜ್ವಾನ, ಈಚಲುಕೊಪ್ಪ, ಹರಿದ್ರಾವತಿ ಇನ್ನಿತರ ಗ್ರಾಮಗಳಲ್ಲಿ ಮರಳು ದಂಧೆಕೋರರು ನದಿಯ ಒಡಲನ್ನು ಬಗೆಯುತ್ತಿದ್ದಾರೆ. ಇದರಲ್ಲಿ ಕೆಲವು ಗ್ರಾಮಗಳಲ್ಲಿ ಅಕ್ರಮ ಮರಳನ್ನು ನದಿಯಂಚಿನಲ್ಲಿ ಸಂಗ್ರಹಿಸಿಕೊಂಡು ದುಬಾರಿ ಬೆಲೆಗೆ ಸಾಗಾಣಿಕೆ ಸಿದ್ದತೆಯಲ್ಲಿದ್ದು ಕೆಲವು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಗ್ರಹಕಾರರಿಂದ ಲಂಚ ಪಡೆದು ಗೊತ್ತಿಲ್ಲದವರಂತೆ ನಟಿಸುತ್ತಿದ್ದಾರೆಂದು ದಾಮೋಧರ್ ಆರೋಪಿಸಿದ್ದಾರೆ.

ಮರಳು ಗಣಿಗಾರಿಕೆದಾರರ ದಂಡೆ ಇದ್ದು ದೂರು ಕೊಟ್ಟವರ ಮೇಲೆಯೇ ಲೋಡ್ ಲಾರಿ ಹರಿಸಲು ಮುಂದಾಗಿದ್ದು ಜೀವಭಯದಿಂದ ನಮಗೇಕೆ ಊರ ಉಸಾಬರಿ ಎಂಬಂತೆ ಕಣ್ಣಿದ್ದು ಕುರುಡರಾಗಿ, ಕಿವಿ ಇದ್ದು ಕಿವುಡರಾಗಿ ಇರುವಂತಾಗಿದೆ.

ರಾತ್ರಿ ಬೆಳಗಾಗುವುದರಲ್ಲಿ ಶ್ರೀಮಂತರು:ಶರಾವತಿ ಉಪನದಿಗಳ ಒಡಲಿನಲ್ಲಿ ಅಕ್ರಮ ಮರಳು ಕಳ್ಳಸಾಗಾಣಿಕೆ ಮಾಡುವುದನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ಹಲವರು ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾಗುವುದರೊಂದಿಗೆ ಮೂರ್ನಾಲ್ಕು ಟಿಪ್ಪರ್ ಲಾರಿ ಮಾಲೀಕರಾಗುತ್ತಿರುವುದರ ಒಳಮರ್ಮ ಈಗ ಸಾರ್ವಜನಿಕರಿಗೆ ಬಹಿರಂಗವಾಗುತ್ತಿದ್ದೆ. ನದಿಯಂಚಿನಲ್ಲಿ ಬಿಹಾರಿ ಕೂಲಿಗಳು ರಾತ್ರಿ ಹಗಲು ಎನ್ನದೆ ಜೆಸಿಬಿ ಇಲ್ಲವೇ ಹೊಸಹೊಸ ಯಂತ್ರೋಪಕರಣಗಳ ಮೂಲಕ ನೀರಿನಿಂದ ಅಕ್ರಮವಾಗಿ ಮರಳನ್ನು ಮೇಲಕ್ಕೆತ್ತಿ ರಾಶಿ ಮಾಡುವುದು ನಂತರದಲ್ಲಿ ಟಿಪ್ಪರ್ ಟ್ರ್ಯಾಕ್ಟರ್,, ಕ್ಯಾಂಟರ್ ಲಾರಿ ಮೂಲಕ ಶಿವಮೊಗ್ಗ ಸಾಗರ,
ಬೆಂಗಳೂರುಗಳಿಗೆ ಸಾಗಾಣಿಕೆ ಮಾಡಲಾಗುತ್ತಿದ್ದರೂ ಕೂಡಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಕಂದಾಯ ಇಲಾಖೆಯವರು ಮಾತ್ರ ಗೊತ್ತಿಲ್ಲದವರಂತೆ ತಮ್ಮ ಕಿಸೆಯನ್ನು ತುಂಬಿಸಿಕೊಳ್ಳುತ್ತಾ ಕುಳಿತಿರುವುದರ ಬಗ್ಗೆ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.

ಇನ್ನಾದರೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಕಾನೂನು ಕ್ರಮಕೈಗೊಳ್ಳುವುದರೊಂದಿಗೆ ಮರಳು ಮಾಫಿಯಾಕ್ಕೆ ಕಡಿವಾಣ ಹಾಕುವರೇ ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!