ಸೊರಬ : ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಕ್ಷೇತ್ರವಾದ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸೊರಬ ತಹಶೀಲ್ದಾರ್ ಹಾಗೂ ಡಿ.ವೈ.ಎಸ್.ಪಿ ಇವರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.
ತಹಶೀಲ್ದಾರ್ ಹುಸೇನ್ ಸರಕಾವಸ್ ಮಾತನಾಡಿ, ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಸಬೇಕು ಎಂದು ಸೂಚಿಸಿದರು.
ಪ್ರತಿ ವರ್ಷ ನಡೆದುಬಂದಂತೆ ಈ ವರ್ಷವೂ ಕೂಡ ಜಾತ್ರಾ ಮುಂಜಾಗ್ರತಾ ಕ್ರಮವನ್ನು ವಹಿಸಬೇಕು ಅಲ್ಲದೇ ಹಿಂದಿನಿಂದ ನಡೆದು ಬಂದ ಸಂಪ್ರದಾಯಿಕ ವಿಧಿ-ವಿಧಾನಗಳನ್ನು ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ಡಿ.ವೈ.ಎಸ್.ಪಿ ಶಿವಾನಂದ ಮದರಕಂಡಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ಜಾತ್ರಾ ಸ್ಥಳದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕ್ರಮ ಕೈಗೊಳ್ಳುತ್ತೇವೆ ಹಾಗೂ ಮುಖ್ಯ ರಸ್ತೆಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗುವುದು ಮತ್ತು ಜಾತ್ರಾ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಾರ್ಯನಿರ್ವಹಣಾ ಅಧಿಕಾರಿ ವಿ.ಎಲ್ ಶಿವಪ್ರಸಾದ್, ಸಿ.ಪಿ.ಐ ಭಾಗ್ಯವತಿ, ಪಿ.ಎಸ್.ಐ ನಾಗರಾಜ್, ಶೀ ರೇಣುಕಾಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಸೇರಿದಂತೆ ವ್ಯವಸ್ಥಾಪನ ಸಮಿತಿಯ ಸದಸ್ಯರು ಮತ್ತಿತರರಿದ್ದರು.