ಗಿರೀಶ್ ಆಚಾರ್ ದೂರಿನ ಮೇರೆಗೆ
ಅಕ್ರಮ ಮರಳು ಸಂಗ್ರಹ ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ ; ನೂರಾರು ಲೋಡ್ ಮರಳು ವಶಕ್ಕೆ !!

0 305


ಹೊಸನಗರ: ತಾಲೂಕಿನ ಶರಾವತಿ ಹಿನ್ನೀರ ಭೂ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ತಿನ ತಾಲೂಕು ಸಂಚಾಲಕ, ಪರಿಸರ ಹೋರಾಟಗಾರ ಗಿರೀಶ್ ಆಚಾರ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ನೂರಾರು ಲೋಡ್ ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದಾರೆ.


ತಾಲೂಕಿನ ಕಸಬಾ ಹೋಬಳಿ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಕೊಪ್ಪ, ಸಣ್ಣ ಎರಗಿ, ಮಣಸಟ್ಟೆ, ಹೆಚ್. ಹೊನ್ನೆಕೊಪ್ಪ ಸುತ್ತಮುತ್ತ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರಾರು ಲೋಡ್ ಮರಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ.


ಜೆಸಿಬಿ ಯಂತ್ರ ಬಳಸಿ ಹೊಸನಗರ ತಾಲೂಕಿನ ಶರಾವತಿ ನದಿ ಹಿನ್ನೀರ ಭೂ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ನೂರಾರು ಲೋಡ್ ಮರಳು ಅಕ್ರಮ ಸಂಗ್ರಹವಾಗಿದೆ. ಅಹೋರಾತ್ರಿ ಮರಳು ಸಾಗಾಟ ನಿರಂತರವಾಗಿ ನಡೆದಿದೆ. ಈ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಅರಣ್ಯ ಹಾಗೂ ಖನಿಜ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟವಾಗುತ್ತಿದೆ. ಕೂಡಲೇ ಕ್ರಮಕೈಗೊಳ್ಳಿ ಎಂದು ಗಿರೀಶ್ ಜಿಲ್ಲಾಧಿಕಾರಿಗಳಿಗೆ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕಂದಾಯ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗಳು ಈ ದಾಳಿ ಮಾಡಿದ್ದಾರೆ. ಅಕ್ರಮ ಮರಳು ಸಂಗ್ರಹಣೆ ಕೆಪಿಸಿ ಹಾಗೂ ಅರಣ್ಯ ಇಲಾಖೆ ಸರಹದ್ದಿನಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ಅರಣ್ಯ ಇಲಾಖೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಗಣಿ ವಿಜ್ಞಾನಿ ಮಾನಸ, ಕಂದಾಯ ಇಲಾಖೆಯ ಗಾಮ ಲೆಕ್ಕಿಗ ಕೌಶಿಕ್, ಗ್ರಾಮ ಸಹಾಯಕಿ ದೀಪಾ, ಅರಣ್ಯ ಇಲಾಖೆ ಗಾರ್ಡ್ ಮಂಜುನಾಥ್ ಹಾಗೂ ದೂರುದಾರ ಗಿರೀಶ್ ಆಚಾರ ಸಹ ಈ ಕಾರ‍್ಯಚಾರಣೆಯಲ್ಲಿ ಭಾಗವಹಿಸಿದ್ದರು.

“ಹೊಸನಗರ ಹಾಗೂ ಸಾಗರ ತಾಲೂಕಿನಲ್ಲಿ ಪ್ರಾಕೃತಿಕ ಸಂಪತ್ತು ನಿರಂತರ ಲೂಟಿ ಆಗುತ್ತಿದೆ. ಕಲ್ಲು, ಮರಳು, ಜೆಲ್ಲಿ ಸೇರಿದಂತೆ ನೈಸರ್ಗಿಕ ಸಂಪತ್ತು ಅಹೋರಾತ್ರಿ ಅಕ್ರಮ ಸಾಗಾಟ ನಡೆದಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ದೂರು ನೀಡಿದರೂ ಮೌನಕ್ಕೆ ಶರಣಾಗಿದ್ದಾರೆ. ಟಾಸ್ಕ್ ಫೋರ್ಸ್ ಸಮಿತಿ ಅಕ್ರಮ ದಂಧೆಕೋರರಿಗೆ ಬೆನ್ನೆಲುಬಾಗಿ ನಿಂತಂತೆ ತೋರಿ ಬರುತ್ತಿದೆ. ಈ ಕೂಡಲೇ ಜಿಲ್ಲಾಡಳಿತ ಆಯ್ದ ಸ್ಥಳಗಳಲ್ಲಿ ಅಕ್ರಮ ತಡೆಗೆ ಚೆಕ್‌ಪೋಸ್ಟ್ ನಿರ್ಮಿಸಬೇಕು, ಗಸ್ತು ವಾಹನ ತಿರುಗಾಟಕ್ಕೆ ಕ್ರಮಕೈಗೊಳ್ಳಬೇಕು. ಸಾಗರ, ಹೊಸನಗರ ತಾಲೂಕು ಕೇಂದ್ರದಲ್ಲಿ ಗಣಿ ಇಲಾಖೆ ಕಚೇರಿ ತೆರೆಯಲು ಸರ್ಕಾರಕ್ಕೆ ಪ್ರಸ್ಥಾವನೆ ಈ ಕೂಡಲೇ ಸಲ್ಲಿಸಿಬೇಕು ಹಾಗೂ ಬಡ, ಮಧ್ಯಮವರ್ಗದ ಜನರಿಗೆ ಕೈಗೆಟುಕು ದರದಲ್ಲಿ ಮರಳು ದೊರೆಯಲು ಸರ್ಕಾರಿ ಮರಳು ಯಾರ್ಡ್ ಮೂಲಕ ಪರವಾನಿಗೆ ನೀಡಿ ಮರಳು ಸಾಗಾಟಕ್ಕೆ ಅನುವು ಮಾಡಿಕೊಡಬೇಕು.
– ಗಿರೀಶ್ ಆಚಾರ್, ಪರಿಸರ ಹೋರಾಟಗಾರ, ತಾಲೂಕು ಸಂಚಾಲಕ, ಜನಸಂಗ್ರಾಮ್ ಪರಿಷತ್ತು, ಹೊಸನಗರ

Leave A Reply

Your email address will not be published.

error: Content is protected !!