ಸೊರಬ: ವೇತನ ಪರಿಷ್ಕರಣೆ ಮತ್ತು ಹೊಸ ಪಿಂಚಣಿ ಯೋಜನೆ (ಎನ್‍ಪಿಎಸ್) ರದ್ದುಪಡಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಆರಂಭಿಸಿರುವುದರಿಂದ ಪಟ್ಟಣ ಸೇರಿ ತಾಲೂಕಿನಾದ್ಯಂತ ಸರ್ಕಾರಿ ಸೇವೆಗಳಲ್ಲಿ ಬುಧವಾರ ವ್ಯತ್ಯಯ ಉಂಟಾಯಿತು.
ಪಟ್ಟಣದಲ್ಲಿ ಸದಾ ಸಾರ್ವಜನಿಕರಿಂದ ಗಿಜಿಗುಡುತ್ತಿದ್ದ ತಾಲೂಕು ಕಚೇರಿ, ಪುರಸಭೆ, ತಾಲೂಕು ಪಂಚಾಯ್ತಿ ಕಚೇರಿಗಳು ಬಾಗಿಲು ಹಾಕಿದ್ದರಿಂದ ಬಿಕೋ ಎನ್ನುವ ವಾತಾವರಣ ಸೃಷ್ಠಿಯಾಗಿತ್ತು. ಉಳಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಕಚೇರಿಗಳಿಗೆ ನೌಕರರು ಹಾಜರಾಗದ ಕಾರಣ ಕಚೇರಿಗಳಿಗೆ ಬೀಗ ಜಡಿಯಲಾಗಿತ್ತು. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು-ಬೋಧಕರು ಸೇವೆ ಸಲ್ಲಿಸದ ಕಾರಣ ತರಗತಿಗಳು ನಡೆಯಲಿಲ್ಲ. ಕಾರಣ ವಿದ್ಯಾರ್ಥಿಗಳು ಮನೆಗಳಿಗೆ ವಾಪಾಸ್ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.
ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಇಲಾಖೆಯ ಸಿಬ್ಬಂದಿಯು ಮುಷ್ಕರಕ್ಕೆ ಕೈ ಜೋಡಿಸಿದ್ದು, ತುರ್ತು ಆರೋಗ್ಯ ಸೇವೆಗಳನ್ನು ಹೊರತು ಪಡಿಸಿ, ಉಳಿದಂತೆ ಎಲ್ಲಾ ಸೇವೆಗಳು ಬಂದ್ ಆಗಿದ್ದವು. ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಹೊರ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಿದರು. ಇನ್ನು ಖಾಸಗಿ ಶಾಲಾ-ಕಾಲೇಜ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಇನ್ನು ವಿವಿಧ ಕಚೇರಿಗಳಲ್ಲಿ ಖಾಯಂ ಸರ್ಕಾರಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ದಿನಗೂಲಿ ನೌಕರರು ಹಾಗೂ ಗುತ್ತಿಗೆ ನೌಕರರು ಸಹ ಕರ್ತವ್ಯಕ್ಕೆ ಹಾಜರಾಗಲಿಲ್ಲ.
ನೌಕರರ ಸಭೆ :
ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್ ನೇತೃತ್ವದಲ್ಲಿ ನೌಕರರ ಸಂಘದ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಬೇಡಿಕೆಯನ್ನು ಸರ್ಕಾರ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶನದಂತೆ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸಲಾಗುತ್ತಿದ್ದು, ಇದಕ್ಕೆ ಎಲ್ಲಾ ಇಲಾಖೆಯ ನೌಕರರು ಪೂರ್ಣ ಬೆಂಬಲ ನೀಡಿದ್ದಾರೆ. ಸರ್ಕಾರಿ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಇದು ನೌಕರರಿಗೆ ತೃಪ್ತಿ ತಂದಿಲ್ಲ. ಇನ್ನೂ ಎನ್‍ಪಿಎಸ್ ನೌಕರರಿಗೆ ನ್ಯಾಯ ದೊರೆತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸಂಘದ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಸಿ.ಪಿ. ಸದಾನಂದ, ಖಜಾಂಚಿ ಸಂತೋಷ್ ಕುಮಾರ್, ಹಿರಿಯ ಉಪಾಧ್ಯಕ್ಷ ನಟೇಶ್, ಉಪಾಧ್ಯಕ್ಷ ಮಂಜಪ್ಪ, ಸೋಮಶೇಖರ್, ಚಂದ್ರಾನಾಯ್ಕ್, ಪಿಡಿಒ ಸಂಘದ ತಾಲೂಕು ಅಧ್ಯಕ್ಷ ಎಸ್. ಚಿದಾನಂದ, ಆರೋಗ್ಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ನಾಗರಾಜ್, ನೌಕರರಾದ ದೀಪಕ್ ದೋಂಗಡೇಕರ್, ರಾಮಪ್ಪ, ಸಂಜಯ್, ಕೃಷ್ಣಮೂರ್ತಿ, ಬಾಲಚಂದ್ರ, ವಿನಯ ಕುಮಾರ್, ಸಂದೀಪ್, ಸಿದ್ದನಗೌಡ, ಎನ್. ಗಣಪತಿ, ರವಿ ಕುಮಾರ್, ದಿವಾಕರ್ ನಾಯ್ಕ್ ಸೇರಿದಂತೆ ಇತರರಿದ್ದರು.