Hosanagara

ಅಕ್ರಮ ಮರಳುಗಾರಿಕೆ ತಡೆಯದಿದ್ದರೆ ಡಿಸಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ : ಗಿರೀಶ್ ಆಚಾರ್

ಹೊಸನಗರ ; ತಾಲ್ಲೂಕಿನಲ್ಲಿ ಶರಾವತಿ ಹಿನ್ನೀರು ಪ್ರದೇಶಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು ಈ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಎಷ್ಟೇ ದೂರು ನೀಡಿದರೂ ದಂಧೆಗೆ ಕಡಿವಾಣ ಬಿದ್ದಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು ವಿಚಾರಣೆ ಹಂತಕ್ಕೆ ಬಂದಿದೆ. ಮೂರು ತಿಂಗಳಿಂದ ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇನ್ನೂ ಮೂರು ದಿನಗಳಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಸಂಗ್ರಹಣೆ ಹಾಗೂ ಸಾಗಾಣಿಕೆಗೆ ಬ್ರೇಕ್ ಹಾಕದಿದ್ದರೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಜನ ಸಂಗ್ರಾಮ ಪರಿಷತ್ ಸಂಚಾಲಕ ಗಿರೀಶ್ ಆಚಾರ್‌ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಸನಗರ ತಾಲ್ಲೂಕಿನ ಸುತ್ತ-ಮುತ್ತಲಿನ ಶರಾವತಿ ನದಿ ಪ್ರದೇಶಗಳಲ್ಲಿ ಬೋಟ್ ಮೂಲಕ ಮರಳು ಗಣಿಗಾರಿಕೆ ನಡೆಯುತ್ತಿದೆ. ಹೊಸನಗರ ಸಮೀಪ ದ್ಯಾವರ್ಸದ ಎಡಚಿಟ್ಟೆ ಸುತ್ತ-ಮಳಲಿ ಬಾಳೆಕೊಪ್ಪ ತೆಂಕಬೈಲ್, ಈಚಲಕೊಪ್ಪಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಹೊಸನಗರದಿಂದ ಉಮಾಪತಿ ದೇವಸ್ಥಾನದ ಮಾರ್ಗದ ಮಧ್ಯದಲ್ಲಿ ಅಕ್ರಮವಾಗಿ ಮರಳು ಶೇಖರಣೆ ಹೊಸನಗರದಿಂದ ಒಂದು ಕಿ.ಮೀ. ದೂರದ ಶಿವಮೊಗ್ಗ ರಸ್ತೆಯಲ್ಲಿ ಮರಳು ಶೇಖರಣೆ ಹಾಗೂ ಸುತ್ತ-ಮುತ್ತ ಹುಡುಕಿದರೆ ನೂರಾರು ಲೋಡ್ ಗಟ್ಟಲೇ ಮರಳು ಶೇಖರಣೆ ಮಾಡಿ ಇಡಲಾಗಿದ್ದು ಇವೆಲ್ಲದಕ್ಕೂ ಅಧಿಕಾರಿ ವರ್ಗ ಕಡಿವಾಣ ಹಾಕಬೇಕಾಗಿದೆ ಎಂದಿದ್ದಾರೆ.

ಅಕ್ರಮ ಮರಳುಗಾರಿಕೆಗೆ ಶಾಸಕರು ಮೌನ !

ಹೊಸನಗರ ತಾಲ್ಲೂಕಿನ ಸುತ್ತ-ಮುತ್ತ ಹಿನ್ನೀರಿನ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಗೊತ್ತಿದ್ದರೂ ಹೊಸನಗರ-ಸಾಗರ ಕ್ಷೇತ್ರದ ಶಾಸಕರು ಮೌನವಾಗಿರುವುದನ್ನು ಕಂಡರೆ ಶಾಸಕರೇ ಅಕ್ರಮ ಮರಳು ದಂಧೆಕೋರರಿಗೆ ಸಾಥ್ ನೀಡುತ್ತಿದ್ದಾರೆ ಎಂಬ ಅನುಮಾನ ಬರುವುದರ ಜೊತೆಗೆ ಅಧಿಕಾರಿ ವರ್ಗದವರನ್ನು ತಮ್ಮ ಕಂಟ್ರೋಲ್‌ನಲ್ಲಿಟ್ಟುಕೊಂಡು ಅಕ್ರಮ ಗಣಿಗಾರಿಕೆಗೆ ಸಾಥ್ ನೀಡುತ್ತಿದ್ದಾರೆ. ಇಲ್ಲವಾದರೆ ಅಧಿಕಾರಿ ವರ್ಗ ಇಷ್ಟು ಮೌನವಾಗಿರಲು ಸಾಧ್ಯವಿಲ್ಲ? ಕಾಲ ಮಿಂಚಿಲ್ಲ ತಕ್ಷಣ ಅಧಿಕಾರಿ ವರ್ಗದವರಿಗೆ ಅಕ್ರಮ ಮರಳುಗಾರಿಕೆಯ ವಿರುದ್ಧ ಸೂಚಿಸಿ ತಡೆ ಮಾಡಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳೇ ಗಮನ ಹರಿಸಿ :

ಈಗಾಗಲೇ ಅಧಿಕಾರಿಗಳ ಮೂಲಕ ಹೊಸನಗರದ ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿದೆ ಎಂದು ನಿಮ್ಮ ಗಮನಕ್ಕೆ ತರಲಾಗಿದ್ದು ತಾವು ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಈಗ ತಮ್ಮದೇ ಪಕ್ಷದ ಶಾಸಕರ ಕ್ಷೇತ್ರದಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಮನ ಹರಿಸಲಿ ಎಂದರು.

ಮಾಜಿ ಶಾಸಕರು ಎಲ್ಲಿದ್ದಾರೆ ?

ಹೊಸನಗರ-ಸಾಗರದ ಮಾಜಿ ಶಾಸಕರು ಅಕ್ರಮ ಮರಳುಗಾರಿಕೆಯ ವಿರುದ್ಧ ಎಲ್ಲೂ ಮಾತನಾಡುತ್ತಿಲ್ಲ. ತಮ್ಮ ಕ್ಷೇತ್ರದಲ್ಲಿಯೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಪ್ರತಿದಿನ ಪತ್ರಿಕೆಗಳಲ್ಲಿ, ವಾಟ್ಸ್ಆಪ್ ಗ್ರೂಪ್‌ಗಳಲ್ಲಿಯೂ ಓದುತ್ತಿದ್ದರೂ ಅವರು ಇಲ್ಲಿಯವರೆಗೆ ಇದರ ವಿರುದ್ಧ ಮಾತನಾಡುತ್ತಿಲ್ಲ ಯಾಕೆ? ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಇನ್ನೂ ಮೂರು ದಿನಗಳಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಬೀಳಲಿದೆಯೇ? ಅಥವಾ ಗಿರೀಶ್ ಆಚಾರ್ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಧರಣಿ ನಡೆಸಿದ ನಂತರ ಬ್ರೇಕ್ ಬೀಳಲಿದೆಯೇ ಎಂದು ಕಾದು ನೋಡಬೇಕಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>