RIPPONPETE ; ಖಾಸಗಿ ಅನಧಿಕೃತ ಹಣಕಾಸು ಲೇವಾದೇವಿದಾರರು ಮತ್ತು ಪಾನ್ ಬ್ರೋಕರ್ ಗಳು ಸಾಲ ನೀಡುವುದು ಮತ್ತು ಆಭರಣದ ಮೇಲೆ ಗಿರವಿ ಇಟ್ಟುಕೊಂಡು ಹಣ ನೀಡುವ ಮೂಲಕ ಹೆಚ್ಚಿನ ಬಡ್ಡಿ ವಸೂಲಾತಿ ಮಾಡುವ ಬಗ್ಗೆ ಗ್ರಾಹಕರಿಂದ ದೂರು ಬಂದರೆ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ಖಡಕ್ ವಾರ್ನಿಂಗ್ ನೀಡಿದರು.
‘ಮಲ್ನಾಡ್ ಟೈಮ್ಸ್’ ನಲ್ಲಿ ಡಿಸೆಂಬರ್ 16 ರಂದು ‘ತೆರೆಮರೆಯಲ್ಲಿ ಎಗ್ಗಿಲ್ಲದೆ ಸಾಗಿರುವ ಖಾಸಗಿ ಹಣಕಾಸು ಸಂಸ್ಥೆಗಳ ಮತ್ತು ಪಾನ್‌ಬ್ರೋಕರ್ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಬೀಳೋದು ಯಾವಾಗ ?’ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಸಮಗ್ರ ವರದಿಗೆ ಕೂಡಲೇ ಸ್ಪಂದಿಸಿದ ಪೊಲೀಸ್ ಇಲಾಖೆ, ದಿಢೀರ್ ಇಲ್ಲಿನ ಜ್ಯೂವೆಲರಿ ಅಂಗಡಿಯವರನ್ನು ಮತ್ತು ಖಾಸಗಿ ಹಣಕಾಸು ಸಂಸ್ಥೆಯ ಪಿಗ್ಮಿ ಸಂಗ್ರಹಕಾರನ್ನು ಕರೆಯಿಸಿ ಸಭೆ ನಡೆಸುವ ಮೂಲಕ ಅನಧಿಕೃತವಾಗಿ ಹಣಕಾಸು ವ್ಯವಹಾರ ನಡೆಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಅಲ್ಲದೆ ಹೆಚ್ಚಿನ ಬಡ್ಡಿ ವಸೂಲಾತಿ ಮಾಡುವುದು ಸಹ ಕಾನೂನಿನಲ್ಲಿ ಅಪರಾಧವೇ ಆಗಿದೆ. ತಾವು ಕಾನೂನಿನ ಅರಿವಿಲ್ಲದೇ ಇಂತಹ ವ್ಯವಹಾರ ನಡೆಸುತ್ತಿರುವ ಬಗ್ಗೆ ಠಾಣೆಗೆ ಯಾರಾದರೂ ನೊಂದ ಗ್ರಾಹಕರು ದೂರು ನೀಡಿದರೆ ನಾವು ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿ, ಖಾಸಗಿ ಹಣಕಾಸು ವ್ಯವಹಾರ ನಡೆಸುವವರ ಮತ್ತು ಆಭರಣ ಅಂಗಡಿಯವರ ಸಭೆಯಲ್ಲಿ ಪೊಲೀಸ್ ಇಲಾಖೆಯ ಕೈಗೊಳ್ಳವ ಬಗ್ಗೆ ಕಾನೂನು ತಿಳುವಳಿಕೆಯನ್ನು ಸಮಗ್ರವಾಗಿ ವಿವರಿಸಿದರು.
ಇಲ್ಲಿಯವರೆಗೂ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಬಡ್ಡಿ ವ್ಯವಹಾರ ನಡೆಸುವ ಮತ್ತು ಆಭರಣ ಅಂಗಡಿಗಳಲ್ಲಿ ಬಂಗಾರ ಅಡಮಾನ ಸಾಲ ಪಡೆದು ಹೆಚ್ಚಿನ ಬಡ್ಡಿ ವಸೂಲಾತಿ ಮಾಡುತ್ತಿದ್ದಾರೆಂಬ ಬಗ್ಗೆ ಠಾಣೆಗೆ ಗ್ರಾಹಕರಿಂದ ದೂರುಗಳು ಬಂದಿಲ್ಲ. ಇನ್ನೂ ಮುಂದೆ ಯಾವುದೇ ಗ್ರಾಹಕರು ಅನಧಿಕೃತ ಖಾಸಗಿ ಹಣಕಾಸು ಸಂಸ್ಥೆಯವರು ಪಾನ್ ಬ್ರೋಕರ್ ಗಳು ಹೆಚ್ಚು ಬಡ್ಡಿ ವಸೂಲಾತಿ ಮಾಡುತ್ತಾರೆಂದು ದೂರು ನೀಡಿದರೆ ಹಿಂದೆ ಮುಂದೆ ನೋಡದೆ ಮೀಟರ್ ಬಡ್ಡಿಯಲ್ಲಿ ತೊಡಗುವ ಸಂಸ್ಥೆ ಮತ್ತು ಪಾನ್‌ಬ್ರೋಕರ್ಸ್ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ಪ್ರವೀಣ್ ಕುಮಾರ್ ಮತ್ತು ಎಎಸ್‌ಐ ಮಂಜಪ್ಪ, ಹಾಲಪ್ಪ ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.