HOSANAGARA | ಸ್ವಾತಂತ್ರ್ಯ ಬಂದು ಮೂರು ತಲೆಮಾರು ಕಳೆದರೂ ಸ್ವಾತಂತ್ರ್ಯ ಹೋರಾಟಗಾರರ ನೆನಪಾಗಲಿ ಅಥವಾ ಹೋರಾಟದ ಘಟನಾವಳಿಗಳಾಗಲಿ ನಮ್ಮ ಈ ತಲೆಮಾರಿಗೆ ನೆನಪಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಘಟನಾವಳಿ ನೆನಪಿಸುವ ಅಗತ್ಯವಿದೆ ಎಂದು ಹೊಸನಗರ ಹಿರಿಯ ಸಾಹಿತಿ ನಾಗರಕೊಡಿಗೆ ಗಣೇಶಮೂರ್ತಿ ಹೇಳಿದರು.
ಅವರು ಇಂದು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಲೆನಾಡು ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಘಟನಾವಳಿ ಕುರಿತ ರಸಪ್ರಶ್ನೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡುತ್ತ ತಿಳಿಸಿದರು.
ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾದ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಹೊಸನಗರ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳ ಸಂಘದ ಅಧ್ಯಕ್ಷ ಕೆ ರೇಣುಕೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯದ ಘಟನಾವಳಿಗಳ ರಸಪ್ರಶ್ನೆ ಮುಖಾಂತರ ವಿದ್ಯಾರ್ಥಿಗಳಿಗೆ ನೆನಪು ಮಾಡಿಸುತ್ತಿರುವುದು ಶ್ಲಾಘನೀಯ ವಿಚಾರವೆಂದರು.
ಮುಖ್ಯ ಅತಿಥಿಗಳಾಗಿ ಮಲೆನಾಡು ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎನ್ ಸುಧಾಕರ್, ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ನಗರ ರಾಘವೇಂದ್ರ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜೇಂದ್ರ ಶೇಟ್ ಮಾತನಾಡಿದರು
ಕಸಾಪ ಕಾರ್ಯದರ್ಶಿ ವೆಂಕಟೇಶಮೂರ್ತಿ, ಸದಾಶಿವ ಶ್ರೇಷ್ಠಿ , ಶಾಂತಮೂರ್ತಿ ಉಪಸ್ಥಿತರಿದ್ದ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ. ನರಸಿಂಹ ವಹಿಸಿದ್ದರು.
ಕಸಾಪ ಕಾರ್ಯದರ್ಶಿ ಕುಬೇಂದ್ರಪ್ಪ ಸ್ವಾಗತಿಸಿದರು. ಮಲೆನಾಡು ಪ್ರೌಢಶಾಲೆ ಕನ್ನಡ ಶಿಕ್ಷಕ ಚಂದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಕಾರಣಗಿರಿ ಪ್ರಥಮ ಸ್ಥಾನವನ್ನು, ನಗರ ಪ್ರೌಢಶಾಲೆ ದ್ವಿತೀಯ ಸ್ಥಾನವನ್ನು, ಹೋಲಿ ರೆಡಿಮರ್ ಪ್ರೌಢಶಾಲೆ ತೃತೀಯ ಸ್ಥಾನವನ್ನು ಪಡೆದವು. ಈ ಸ್ಪರ್ಧೆಯಲ್ಲಿ ವಿಜೇತರಾದವರು ಇದೆ ಆಗಸ್ಟ್ 12ರಂದು ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಭಾಗವಹಿಸಲಿದ್ದಾರೆ.