ಹೊಸನಗರ ; ಇಲ್ಲಿನ ಐತಿಹಾಸಿಕ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಸ್ವಾಮಿರಾವ್ ಅವರು ಜೂ.4 ರಂದು ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ ಕಾರ‍್ಯಕ್ರಮ ನಡೆಸಲು ನಿರ್ಧರಿಸಿ ಆಹ್ವಾನ ಪತ್ರಿಕೆ ವಿತರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಸರ್ಕಾರದ ಶಿಷ್ಟಾಚಾರ ಉಲ್ಲಂಘಿಸಿ ಕಾರ‍್ಯಕ್ರಮ ಆಯೋಜಿಸಿರುವುದರಿಂದ ಈ ಕಾರ‍್ಯಕ್ರಮ ದಿನಾಂಕ ರದ್ದುಪಡಿಸಿ ದೇವಳದ ಕಾಮಗಾರಿ ಪೂರ್ಣಗೊಂಡ ನಂತರ ಇಲಾಖೆ ಅನುಮತಿ ಪಡೆದು ದಿನಾಂಕ ನಿಗದಿಪಡಿಸುವಂತೆ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ತಿಳುವಳಿಕೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ.
ಈ ದೇವಸ್ಥಾನವು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನ ಆಗಿರುವುದರಿಂದ ಸರ್ಕಾರದ ಕಾರ‍್ಯಕ್ರಮಗಳನ್ನು ಆಯೋಜಿಸುವ ಮೊದಲು ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಮುಜರಾಯಿ ಇಲಾಖೆಯ ಅನುಮೋದನೆ ಪಡೆದುಕೊಂಡು ಕಾರ್ಯನಿರ್ವಹಿಸಬೇಕಾಗಿರುತ್ತದೆ.
ಮಾರುತಿಪುರ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರುಗಳು ದೇವಸ್ಥಾನದ ಕೆಲಸ ಕಾರ್ಯಗಳು ಸಂಪೂರ್ಣ ಆಗದೆ ಇರುವುದರಿಂದ ಬರುವ ಭಕ್ತಾದಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಭಕ್ತರ ಹಿತದೃಷ್ಟಿಯಿಂದ ಕಾಮಗಾರಿ ಸಂಪೂರ್ಣವಾದ ನಂತರ ದೇವರ ಪುನರ್ ಪ್ರತಿಷ್ಠಾಪನ ಕಾರ‍್ಯಕ್ರಮ ನಿಗದಿಪಡಿಸಬೇಕೆಂದು ಮೇ 16 ರಂದು ತಹಸೀಲ್ದಾರ್ ಅವರಿಗೆ ಮನವಿ ಮಾಡಿದ್ದು, ಈ ನಿಮಿತ್ತ ತಹಸೀಲ್ದಾರ್ ಈ ಕಾರ‍್ಯಕ್ರಮವನ್ನು ರದ್ದುಪಡಿಸಿ ನಿಯಮಾನುಸಾರ ಮುಜರಾಯಿ ಇಲಾಖೆಯ ಅನುಮತಿಯನ್ನು ಪಡೆದು ಕಾರ‍್ಯಕ್ರಮದ ದಿನಾಂಕವನ್ನು ಮರು ನಿಗದಿಪಡಿಕೊಳ್ಳಲು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರಿಗೆ ಸೂಚಿಸಿದ್ದಾರೆ.