ಶಿವಮೊಗ್ಗ :ಜಿಲ್ಲೆಯ ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಪ್ರಸಿದ್ಧ ಅಬ್ಬಿ ಜಲಪಾತದಲ್ಲಿ ಪ್ರವಾಸಿಗನೊಬ್ಬ ನೀರುಪಾಲಾದ ದುರ್ಘಟನೆ ಸಂಭವಿಸಿದೆ. ಈ ಪ್ರಕರಣದ ಹಿನ್ನೆಲೆ ಅರಣ್ಯ ಇಲಾಖೆ ಕಠಿಣ ಕ್ರಮಗಳತ್ತ ಹೆಜ್ಜೆ ಹಾಕಿದೆ.
ಎಚ್ಚರಿಕೆ ಫಲಕ ಇದ್ದರೂ ನಿರ್ಲಕ್ಷ್ಯ:
ಈ ಪ್ರದೇಶದ ಅಪಾಯವನ್ನು ಮನಗಂಡ ನಗರ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಸಂತೋಷ್ ನೇತೃತ್ವದಲ್ಲಿ ಈಗಾಗಲೇ ಜೂನ್ ತಿಂಗಳಲ್ಲಿಯೇ ಅಗಳ ಹೊಡೆದು, ಎಚ್ಚರಿಕೆ ಬೋರ್ಡ್‌ಗಳನ್ನು ಹಾಕಲಾಗಿತ್ತು. ಆದರೂ, ಕೆಲ ಪ್ರವಾಸಿಗರು ಈ ಸೂಚನೆಗಳನ್ನು ಲೆಕ್ಕಿಸದೇ ಅಪಾಯಭರಿತ ಪ್ರದೇಶಕ್ಕೆ ಹೋಗುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ಕಾಲುಜಾರಿ ನೀರುಪಾಲಾದ ಯುವಕ:
ಇತ್ತೀಚೆಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ನಾಗರಭಾವಿಯ ಖಾಸಗಿ ಕಂಪನಿಯ ಮ್ಯಾನೇಜರ್ ರಮೇಶ್ ಎಂಬಾತ ಅಬ್ಬಿ ಜಲಪಾತದ ಬಳಿ ವಿಡಿಯೋಗೆ ಪೋಸ್ ನೀಡುತ್ತಿರುವಾಗ ಕಾಲುಜಾರಿ ನದಿಗೆ ಬಿದ್ದು ಸಾವಿಗೀಡಾಗಿದ್ದಾರೆ. ಈ ಘಟನೆ ಪ್ರವಾಸಸ್ಥಳದ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆ ಎಬ್ಬಿಸಿದೆ.
ಶಾಶ್ವತ ತಂತಿಬೇಲಿಗೆ ಮುಂದಾದ ಇಲಾಖೆ:
ಈ ದುರ್ಘಟನೆಯ ಬಳಿಕ, ಅನಧಿಕೃತ ಪ್ರವೇಶವನ್ನು ತಡೆಯಲು ಅರಣ್ಯ ಇಲಾಖೆ ಶಾಶ್ವತ ತಂತಿಬೇಲಿ ನಿರ್ಮಾಣಕ್ಕೆ ಮುಂದಾಗಿದೆ. ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದ್ದು, ಅನಧಿಕೃತವಾಗಿ ಒಳಹೊಗ್ಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಎಫ್‌ಓ ಸಂತೋಷ್ ತಿಳಿಸಿದ್ದಾರೆ.
ಫೋಟೊ ಹಾಗು ರೀಲ್ಸ್ ಆಸೆಗೆ ಜೀವ ತ್ಯಾಗ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು .ಪ್ರವಾಸಿಗರು ಎಚ್ಚರಿಕೆಯಿಂದ ಇರುವುದು ಒಳಿತು, ಸರಕಾರ ಹಾಗೂ ಇಲಾಖೆಗಳಿಂದ ನೀಡಲ್ಪಟ್ಟ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಹಜ ಸೌಂದರ್ಯದ ಸವಿಯನ್ನು ಸುರಕ್ಷಿತವಾಗಿ ಅನುಭವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.