HOSANAGARA ; “ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ” ಅಭಿಯಾನದಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದು, ರೈತರಿಂದ ರೈತರಿಗಾಗಿ ಹಾಗೂ ದುರ್ಬಲ ವರ್ಗದವರು, ಮಹಿಳೆಯರು, ಮಕ್ಕಳಿಗೆ ಆದ್ಯತೆ ನೀಡಿ ಕ್ರಿಯಾ ಯೋಜನೆ ಸಿದ್ದಪಡಿಸುವುದಾಗಿ ಜಿ.ಪಂ ಸಿಇಓ ಎನ್.ಹೇಮಂತ್ ತಿಳಿಸಿದರು.
ಗುರುವಾರ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಲಾಗಿದ್ದ “ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲಾ ಪಂಚಾಯತ್ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಅಕ್ಟೋಬರ್ 02 ರಿಂದ ಒಂದು ತಿಂಗಳ ಕಾಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ “ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ” ಅಭಿಯಾನ ನಡೆಸಲಿದೆ. ಈ ಯೋಜನೆಯಡಿ ಒದಗಿಸಲಾಗುವ ಸೌಲಭ್ಯಗಳನ್ನು ಎಲ್ಲಾ ಅರ್ಹ ಕೂಲಿಕಾರರು ಮತ್ತು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಭಿಯಾನದ ಅವಧಿಯಲ್ಲಿ ವ್ಯಾಪಕ ಜನಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಂಡು ಎಲ್ಲಾ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿ, ಗಂಡು ಹೆಣ್ಣಿಗೆ ಸಮಾನ ಕೂಲಿ ಪ್ರತಿ ದಿನಕ್ಕೆ ರೂ.349/-, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷ ಚೆತನರಿಗೆ ಶೇ.50 ರಷ್ಟು ರಿಯಾಯಿತಿ, ಕಾಮಗಾರಿಯ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳು, ಅಕುಶಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರುಗಳು ನಿರ್ವಹಿಸುವ ಕೆಲಸಕ್ಕೆ /ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ.10ರಷ್ಟು ಕೆಲಸ ಪ್ರಮಾಣದಲ್ಲಿ ರಿಯಾಯಿತಿ ನೀಡುವ ಕುರಿತು ಮಾಹಿತಿ ನೀಡಿದ ಅವರು ಮಹಿಳೆಯರ ಭಾಗವಹಿಸುವಿಕೆಯನ್ನು ಕನಿಷ್ಟ ಶೆ.60 ಪ್ರತಿಶತಕ್ಕೆ ಹೆಚ್ಚಿಸಲಾಗುವುದಾಗಿ ಎಂದು ತಿಳಿಸಿದರು.
ವೈಯಕ್ತಿಕ ಕಾಮಗಾರಿಗಳ ಅನುಷ್ಠಾನದ ಹಂತದಲ್ಲಿ ಫಲಾನುಭವಿಯು/ ಕುಟುಂಬವು ಜೀವಿತಾವಧಿಯಲ್ಲಿ ರೂ.5.00 ಲಕ್ಷಗಳ ಮಿತಿಯೊಳಗೆ ಕಾಮಗಾರಿಗಳನ್ನು ಪಡೆಯಬಹುದಾಗಿದ್ದು, ಈ ಬಗ್ಗೆ ಕಾಮಗಾರಿ ಬೇಡಿಕೆ ಸಲ್ಲಿಸುವ ಸಲುವಾಗಿ ಜಾಗೃತಿ ವಾಹನಗಳಲ್ಲಿ, ಅಂಗನವಾಡಿ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ ಮತ್ತು ಹಾಲಿನ ಕೇಂದ್ರಗಳಲ್ಲಿ ಬೇಡಿಕೆ ಪೆಟ್ಟಿಗೆಗಳನ್ನು ಸ್ಥಾಪಿಸಿ
ದಿನಾಂಕ: 31-10-2024 ರವರೆಗೆ ಅರ್ಜಿಗಳನ್ನು ಸಂಗ್ರಹಿಸಿ, ನಂತರ ಅವುಗಳನ್ನು ಪರಿಶೀಲಿಸಿ ಕ್ರಿಯಾ ಯೊಜನೆಗೆ ಸೇರ್ಪಡೆಗೊಳಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.