ಹೊಸನಗರ ; ಪ್ರತಿದಿನ ಯೋಗ ವ್ಯಾಯಾಮ ಮಾಡುವುದರಿಂದ ನಮ್ಮ ದೇಹಕ್ಕೆ ಯಾವುದೇ ರೋಗ ಬಾರದಂತೆ ಕಾಪಾಡಿಕೊಳ್ಳಬಹುದು. ಮನುಷ್ಯ ಮಾಡುವ ಯೋಗದಿಂದ ಸಾವನ್ನು ಜಯಿಸಬಹುದು ಎಂದು ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಹೇಳಿದರು.
ಇಲ್ಲಿನ ಆರ್ಯಈಡಿಗರ ಸಭಾಭವನದ ಆವರಣದಲ್ಲಿ ಶಿವಮೊಗ್ಗ ರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಮೂರು ದಿನಗಳ ಕಾಲ ಪೊಲೀಸ್ ಸಿಬ್ಬಂದಿಗಳಿಗೆ ಯೋಗ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಯೋಗ ನಮ್ಮ ದೇಹವನ್ನು ಸದೃಢಗೊಳಿಸುತ್ತದೆ. ಯೋಗದಿಂದ ತೂಕವನ್ನು ಇಳಿಸಬಹುದು. ಯೋಗದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅನೇಕ ರೋಗಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಇದು ಒಂದು ನೈಸರ್ಗಿಕ ಚಿಕಿತ್ಸೆಯ ಪ್ರಕ್ರಿಯೆಯಾಗಿದೆ. ಯೋಗ ಮನಸ್ಸಿನ ಸ್ಥಿತಿ ಹೆಚ್ಚು ಅಭಿವೃದ್ಧಿ ಶೀಲತೆಯಿಂದ ಇರುವಂತೆ ಮಾಡುತ್ತದೆ. ಪ್ರತಿಯೊಂದು ಆಸನವು ನಮ್ಮ ಆರೋಗ್ಯ ವೃದ್ಧಿಗೆ ಕಾರಣವಾಗಿದೆ. ಬೆಳೆಯುವ ಮಕ್ಕಳ ಮನಸ್ಸು ಯೋಗ ಮಾಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಇದರ ಜೊತೆಗೆ ಮಹಿಳೆಯರು ಯೋಗ ಮಾಡುವುದರಿಂದ ಗರ್ಭಕೋಶದ ಆರೋಗ್ಯ ಮತ್ತು ಹಾರ್ಮೋನ್ ಸಮಸ್ಯೆಯನ್ನು ನಿಯಂತ್ರದಲ್ಲಿಡಲು ಕಾರಣವಾಗುತ್ತದೆ. ಪ್ರತಿನಿತ್ಯ ಬೆಳಿಗ್ಗೆಯ ಸಮಯದಲ್ಲಿ ಯೋಗ, ವ್ಯಾಯಾಮ ಹಾಗೂ ಕಾಲ್ನಡಿಗೆ ಮಾಡುವುದರಿಂದ ನಮ್ಮ ದೇಹ ಯಾವಾಗಲೂ ನಿಯಂತ್ರದಲ್ಲಿರುತ್ತದೆ. ಯಾವುದೇ ರೋಗಗಳು ಬರುವುದಿಲ್ಲ. ದೇಹವು ಸಮತೋಲನವಾಗಿ ಕೆಲಸ ಮಾಡಲು ಸ್ಪಂದಿಸುತ್ತದೆ. ಪ್ರತಿಯೊಬ್ಬರು ದಿನಕ್ಕೆ ಒಂದು ಗಂಟೆಯಾದರೂ ಯೋಗ ಮಾಡಲೇಬೇಕು ಎಂದು ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ತಿಳಿಸುವುದರ ಜೊತೆಗೆ ಯೋಗ ಮಾಡುವುದನ್ನು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಈ ಶಿಬಿರದಲ್ಲಿ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





