ಆಸ್ಪತ್ರೆಯಲ್ಲಿ 100 ಹಾಸಿಗೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಶೃಂಗೇರಿ ಬಂದ್‌ಗೆ ಕರೆ !!

0
311

ಶೃಂಗೇರಿ: ತಾಲ್ಲೂಕಿನ ಧನ್ವಂತರಿ ಆಸ್ಪತ್ರೆಗೆ ಸುಸಜ್ಜಿತ ನೂರು ಹಾಸಿಗೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಶೃಂಗೇರಿಯ ಯುವಕರ ಗುಂಪುಗಳು ಅಕ್ಟೋಬರ್ 22 ರಂದು ಸ್ವಯಂ ಪ್ರೇರಿತ ಶೃಂಗೇರಿ ಬಂದ್‌ಗೆ ಕರೆ ನೀಡಿದ್ದಾರೆ.

2007 ರಲ್ಲಿ ಶೃಂಗೇರಿ ತಾಲೂಕು ಆರೋಗ್ಯ ಕೇಂದ್ರವನ್ನು ನೂರು ಹಾಸಿಗೆಯನ್ನೊಳಗೊಂಡ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಮೆಣಸೆ ಬಳಿ ಐದು ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಆದರೆ ಡೀಮ್ಡ್ ಫಾರೆಸ್ಟ್ ನೆಪವೊಡ್ಡಿ ಜಾಗ ಮಂಜೂರಾತಿಗೆ ನಿರಾಕರಿಸಲಾಗಿದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಗದ ಕೊರತೆಯ ಕುಂಟು ನೆಪ ಹೇಳಿಕೊಂಡು ಬದಲಿ ವ್ಯವಸ್ಥೆಯನ್ನು ಮಾಡದೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಪೂರ್ಣ ಮಾಡಿಲ್ಲ ಎಂದು ಆಸ್ಪತ್ರೆ ಹೋರಾಟ ಸಮಿತಿ ಆರೋಪಿಸಿದೆ.

ಶೃಂಗೇರಿ ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ ಊರಾಗಿದ್ದು ಅಕ್ಕ-ಪಕ್ಕದ ತಾಲ್ಲೂಕಿನ ಕನಿಷ್ಟ 10 ಸಾವಿರ ಜನರಿಗೆ ಶೃಂಗೇರಿ ಹತ್ತಿರ ಕೇಂದ್ರವಾಗಿದೆ. ವರ್ಷಕ್ಕೆ ಸರಾಸರಿ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಹೀಗಿದ್ದರೂ ಈ ಕ್ಷೇತ್ರಕ್ಕೆ ಸುಸಜ್ಜಿತ ನೂರು ಹಾಸಿಗೆ ವ್ಯವಸ್ಥೆಯ ಆಸ್ಪತ್ರೆ ಇಲ್ಲದೇ ಇರುವ ಬಗ್ಗೆ ಸಮಿತಿ ವಿಷಾದಿಸಿದೆ.

ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಲಕರಣೆ, ಸುಸಜ್ಜಿತ ಸೌಲಭ್ಯಗಳು ಇಲ್ಲದೆ ತೀವ್ರ ಅನಾರೋಗ್ಯ, ಅಪಘಾತ ಇತರೆ ತುರ್ತು ಸಂದರ್ಭಗಳಲ್ಲಿ ಶೃಂಗೇರಿಯಿಂದ ಸುಮಾರು 100 ಕಿ.ಮೀ ದೂರದ ಊರಿನ ಆಸ್ಪತ್ರೆಗಳಿಗೆ ಹೋಗಬೇಕಿದೆ ಎಂದು ಕಳವಳ ಹೊರಹಾಕಿದೆ.

ಬಹುಪಾಲು ಜನರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು ಸಹ ಹಣದ ಸಮಸ್ಯೆಯಿಂದ ಸಾಕಷ್ಟು ಜನ ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂದಿದೆ.

ಮೆಡಿಕಲ್ ಮಾಫಿಯಾ?

ಇದರ ಹಿಂದೆ ಮೆಡಿಕಲ್ ಮಾಫಿಯಾ ಒತ್ತಡ ಇರುವ ಬಗ್ಗೆಯೂ ಅನುಮಾನ ಹೊರಹಾಕಿದ್ದು ಆ ಕಾರಣಕ್ಕಾಗಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಪ್ರಕ್ರಿಯೆಗೆ ಚಾಲನೆ ನೀಡುತ್ತಿಲ್ಲ, ರಾಜಕೀಯ ಒತ್ತಡವೂ ಕೆಲಸ ಮಾಡುತ್ತಿರುವ ಸಾಧ್ಯತೆಯೂ ಇದೆ ಸಮಿತಿ ಆರೋಪಿಸಿದೆ.

ಈ ತಿಂಗಳ 20ನೇ ತಾರೀಖಿನ ಒಳಗೆ ಬೇಡಿಕೆ ಈಡೇರದೇ ಇದ್ದಲ್ಲಿ ಶೃಂಗೇರಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಹೋರಾಟ ಸಮಿತಿ ಹಿಂದೆ ಎಚ್ಚರಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.

ಪ್ರಮುಖ ಬೇಡಿಕೆಗಳು:

ಜಾಗ ಮಂಜೂರಾತಿ ಸಮಸ್ಯೆ ಬಗೆಹರಿಸಿ ಆರೋಗ್ಯ ಇಲಾಖೆಗೆ ಜಾಗ ಮಂಜೂರು ಮಾಡಿ 100 ಬೆಡ್ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಸಮಿತಿ ಬೇಡಿಕೆ ಮುಂದಿಟ್ಟಿದೆ.

ಈಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ, ಎಂಡೊಸ್ಕೋಫಿ ಹಾಗೂ ಸಿ.ಟಿ ಸ್ಕ್ಯಾನ್ ಮೆಷಿನ್ ಸೌಲಭ್ಯ ಒದಗಿಸುವಂತೆ ಸಮಿತಿ ಒತ್ತಾಯಿಸಿದೆ.

ಈ ಹೋರಾಟ ಸಂಪೂರ್ಣ ರಾಜಕೀಯೇತರವಾಗಿದ್ದು, ಊರಿಗೆ ಬೇಕಾದ ಸುಸಜ್ಜಿತ ಆಸ್ಪತ್ರೆ ಅನಿವಾರ್ಯತೆ ಇದ್ದು ಇದಕ್ಕಾಗಿ ಸಾರ್ವಜನಿಕರು, ಸಮಾನ ಮನಸ್ಕರು ಒಟ್ಟಾಗಿ ಈ ಹೋರಾಟ ಮಾಡುತ್ತಿದ್ದು ಇದಕ್ಕೆ ಎಲ್ಲಾ ಸಂಘಟನೆಗಳು, ಸಂಸ್ಥೆಗಳು, ವ್ಯಾಪಾರಸ್ಥರು ಕೈಜೋಡಿಸಿ ಬಂದ್ ಯಶಸ್ವಿಗೊಳಿಸಲು ಸಮಿತಿಯ ಸಂಘಟಕರು ಕೋರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here