ಹೊಸನಗರ: ಲಾಕ್‌ಡೌನ್’ನಲ್ಲೂ ಎಗ್ಗಿಲ್ಲದೆ ಸಾಗಿದೆ ಅಕ್ರಮ ಮರಳು ದಂಧೆ..! ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ!?

0
2283

ಹೊಸನಗರ: ತಾಲ್ಲೂಕಿನ ಕಸಬಾ ಹೋಬಳಿಯಾದ್ಯಂತ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದಕ್ಕೆ ಅಂಕುಶ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.

ಎಲ್ಲೆಡೆ ಅಕ್ರಮದ್ದೇ ಕಾರುಬಾರು:

ಜಿಲ್ಲೆಯಲ್ಲಿರುವ ಮರಳು ನೀತಿಯ ಪ್ರಕಾರ ಮರಳು ಸಾಗಣಿಕೆಗೆ ಹೊಸನಗರ, ಸಾಗರ ಭಾಗದಲ್ಲಿ ಪರವಾನಗಿ ಇಲ್ಲ ಆದರೆ ಮರಳು ದಂಧೆಯು ತಾಲೂಕಿನಾದ್ಯಂತ ನಡೆಯುತ್ತಿದ್ದು, ಮಾರುತಿಪುರ ಗ್ರಾಪಂ ವ್ಯಾಪ್ತಿಯ ಹಾಗೂ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಎಗ್ಗಿಲ್ಲದೇ ನಡೆಯುತ್ತಿದೆ, ತಾಲೂಕಿನ ಅಧಿಕಾರಿಗಳು ಹಾಗೂ ಪೊಲೀಸರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಸಾರ್ವಜನಿಕರನ್ನ ಕಾಡುತ್ತಿದೆ.

ಹಗಲು-ರಾತ್ರಿ ದಂಧೆ: 

ಅಕ್ರಮ ಮರಳು ಸಾಗಾಟ ಹಗಲು, ರಾತ್ರಿ ಪೂರ್ತಿ ನಡೆಯುತ್ತದೆ. ಈ ದಂಧೆ ಪೊಲೀಸರ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ ಎಂಬ ಅನುಮಾನ ಈ ಭಾಗದ ಜನರದ್ದಾಗಿದೆ. ಈ ಪ್ರದೇಶದಲ್ಲಿ ಮರಳನ್ನ ಯಾವುದೇ ಕಾರಣಕ್ಕು ಎತ್ತುವ ಹಾಗಿಲ್ಲ ಆದರೆ ಇದು ಕೆಲ ಅಧಿಕಾರಿಗಳಿಗೆ ಮಾತ್ರ ಕೈ ಮತ್ತು ಜೇಬು ಎರಡೂ ತುಂಬಿ ತುಳುಕುವಂತೆ ಆದಾಯ ನೀಡುತ್ತದೆ.

ಟಿಪ್ಪರ್ ಲಾರಿಗಳ ಆರ್ಭಟ: 

ಹಗಲು, ರಾತ್ರಿ ವೇಳೆ ಈ ಭಾಗದಲ್ಲಿ ಓಡಾಟ ನಡೆಸುವವರಿಗೆ ಟಿಪ್ಪರ್ ಲಾರಿಗಳ ಆರ್ಭಟ ಕಾಣಿಸುತ್ತದೆ. ಜನರಿಗೆ ಎಲ್ಲೆಂದರಲ್ಲಿ ಕಾಣಸಿಗುವ ಮರಳು ತುಂಬಿದ ಲಾರಿಗಳು ಪೊಲೀಸರ ಕಣ್ಣಿಗೆ ಏಕೆ ಬೀಳುವುದಿಲ್ಲ? ಕಣ್ಣಿದ್ದು ಕುರುಡಾಗಿದ್ದಾರಾ? ಎಂಬ ಅಚ್ಚರಿ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಬರಿದಾದ ನಂದಿಹೊಳೆ ಭೂ ತಾಯಿ ಒಡಲು:

ಮರಳು ದಂಧೆಯಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಭೂಮಿಯನ್ನು ಆಳವಾಗಿ ಬಗೆದಿರುವುದರಿಂದ ಕೃಷಿ ಭೂಮಿ ಬರಡು ಭೂಮಿಯಾಗಿ ಮಾರ್ಪಾಡು ಹೊಂದುತ್ತಿದೆ. ಶರಾವತಿ ಉಪನದಿಯ ನಂದಿಹೊಳೆಯ ಹಿನ್ನೀರಿನಲ್ಲಿ 20ಕ್ಕೂ ಹೆಚ್ಚು ಟಿಪ್ಪರ್ ಲಾರಿ ಹಾಗೂ ನಾಲ್ಕುಕ್ಕೂ ಅಧಿಕ ಜೆಸಿಬಿ ಯಂತ್ರಗಳು ದಿನಂಪ್ರತಿ ನದಿ ಪಾತ್ರದ ಹತ್ತುಕ್ಕೂ ಅಧಿಕ ಕಿ.ಮೀಗಳ ವರೆಗೆ ಈ ಅಕ್ರಮ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.

ಅರಣ್ಯ ಪ್ರದೇಶಗಳಲ್ಲಿ ಮರಳು ಸ್ಟಾಕ್ ಯಾರ್ಡ್:

ಸದ್ಯ ಲಾಕ್‌ಡೌನ್ ಇರುವುದರಿಂದ ಹಲವು ಕಡೆ ಅರಣ್ಯ ಪ್ರದೇಶದಲ್ಲಿ ಮರಳನ್ನ ಸ್ಟಾಕ್ ಮಾಡಿ ಇಡಲಾಗಿದೆ. ಆದರೂ ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯವರಿದ್ದರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

ತಡೆಯೋರು ಯಾರು? 

ಜನರನ್ನು ಕೊನೆಯದಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ, ಈ ಅಕ್ರಮವನ್ನು ತಡೆಯೋರು ಯಾರು? ಎಂಬುದು. ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆ, ಪೊಲೀಸ್‌ ಇಲಾಖೆ, ಅರಣ್ಯ ಇಲಾಖೆ ಹೀಗೆ ಅಕ್ರಮ ತಡೆಯಬೇಕಾದವರೆಲ್ಲರೂ ದಂಧೆಕೋರರ ಜತೆ ಕೈಜೋಡಿಸಿರುವ ಶಂಕೆ ಇದೆ. ಇದಕ್ಕೆ ಅಕ್ರಮ ರಾಜಾರೋಷವಾಗಿ ನಡೆಯುತ್ತಿರುವುದೇ ಸಾಕ್ಷಿ. ಹೀಗೆ ರಕ್ಷಕರೇ ಭಕ್ಷಕರಾಗಿರುವುದರಿಂದ ಜನರ ಹಿತ ಕಾಪಾಡೋರು ಯಾರು? ಎಂಬ ಚಿಂತೆ ಈ ಭಾಗದ ಜನರಲ್ಲಿ ವ್ಯಾಪಕವಾಗಿ ಕಾಡಿದೆ. ಸಾರ್ವಜನಿಕರು ಪ್ರಶ್ನಿಸಿದ್ದಲ್ಲಿ ನಮ್ಮನ್ನ ಯಾವ ಇಲಾಖೆಗಳೂ “ಮುಟ್ಟುವುದಿಲ್ಲ” ಎಸ್.ಪಿ ಅಧಿಕಾರಿಗಳವರೆಗೆ ಮಾಮೂಲು ಕಳಿಸುತ್ತೇವೆ ಎಂದು ಸಾರ್ವಜನಿಕರನ್ನ ಬೆದರಿಸುತ್ತಾರೆ. ಇದಕ್ಕೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಉತ್ತರಿಸಬೇಕಿದೆ.

ಪ್ರಭಾವಿಗಳ ಕೈವಾಡ:

ಸರ್ಕಾರ ಕೂಡ ಪ್ರಭಾವಿಗಳ ಪರ ವಹಿಸುವುದರಿಂದ ಅಧಿಕಾರಿಗಳು ಎಲ್ಲವೂ ಕಂಡರೂ ಕಾಣದಂತಿದ್ದಾರೆ ಎಂಬ ಮಾತುಗಳೂ ಸಹ ಕೇಳಿ ಬರುತ್ತಿವೆ.

ಹಲವು ವರ್ಷಗಳಿಂದ ಅಸ್ತಿತ್ವ ದಲ್ಲಿರುವ ಈ ಮರಳು ನೀತಿ ಕೆಲವು ಮರಳು ಮಾಫಿಯಾ ದಂಧೆ ನಡೆಸುವವರನ್ನು ಹುಟ್ಟು ಹಾಕಿರುವುದು ಮಾತ್ರವೇ ಅಲ್ಲದೇ ಇದರ ವಿರುದ್ಧ ಕ್ರಮ ಕೈಗೊಂಡು ತಮ್ಮ ಕರ್ತವ್ಯ ನಿರ್ವಹಣೆಯಯನ್ನು ಮಾಡಬೇಕಿದ್ದ ಕೆಲವು ಅಧಿಕಾರಿಗಳನ್ನು ಸಹ ಭ್ರಷ್ಟರನ್ನಾಗಿಸಿದೆ.

ಈ ವಿಷಯ ಖಂಡಿತ ಹೊಸದಲ್ಲ, ಆದರೆ ಈ ವಿಚಾರದಲ್ಲಿ ಇಡೀ ವ್ಯವಸ್ಥೆ ಸ್ತಬ್ದವಾಗಿದ್ದು ಇಂತಹ ಅಕ್ರಮ ವ್ಯವಹಾರ ಎಗ್ಗಿಲ್ಲದೇ ನಡೆಯುವುದಾದರೆ, ಇಲಾಖೆಯ ದರ್ಪ ಕೇವಲ ಸಜ್ಜನರ ಮೇಲೆ ಮಾತ್ರವೇನಾ? ಜಿಲ್ಲಾಡಳಿತದ ಕಾರ್ಯನಿರ್ವಹಣೆಯ ಉದ್ದೇಶ ಇಂತಹ ಅವ್ಯವಹಾರಕ್ಕೆ ಅವಕಾಶ ನೀಡುವುದಕ್ಕಾ? ಈ ಅನ್ಯಾಯ, ಅವ್ಯವಹಾರಗಳಿಗೆ ಸಮರ್ಪಕವಾದ ಉತ್ತರ ನೀಡುವವರು ಯಾರು?.

ಜಾಹಿರಾತು

LEAVE A REPLY

Please enter your comment!
Please enter your name here