ಕಾಂಗ್ರೆಸ್‌ ಶಾಸಕರ ದಬ್ಬಾಳಿಕೆ ಪ್ರಶ್ನಿಸಿದ ಮಹಿಳಾ ಪೊಲೀಸ್‌ ಪೇದೆ ಸಸ್ಪೆಂಡ್ !

0 82

ಚಿಕ್ಕಮಗಳೂರು: ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ಕಡೂರಿನ ಕಾಂಗ್ರೆಸ್ ಶಾಸಕ ಕೆ.ಎಸ್ ಆನಂದ್ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವಿಚಾರವಾಗಿ ಮಹಿಳಾ ಪೊಲೀಸ್ ಪೇದೆ ಆರೋಪ ಮಾಡಿದ್ದು, ಶಾಸಕರ ವಿರುದ್ಧ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಆಡಳಿತ ಪಕ್ಷಕ್ಕೆ ಮತ್ತೊಂದು ಮುಜುಗರದ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಮಧ್ಯೆ, ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮಹಿಳಾ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.

ವಾಟ್ಸಾಪ್ ಸ್ಟೇಟಸ್ನಲ್ಲಿ ಏನು ಬರೆದಿದ್ದರು ಮಹಿಳಾ ಪೇದೆ?

ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಹಿಳಾ ಪೇದೆ, ನನಗೆ ಏನಾದರೂ ತೊಂದರೆಯಾದರೆ ಕಡೂರು ಶಾಸಕ ಕಾರಣ. ಕಡೂರು ಶಾಸಕರಿಗೆ ನನ್ನ ಧಿಕ್ಕಾರ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಉಲ್ಲೇಖಿಸಿದ್ದರು. ಈ ಮಧ್ಯೆ, ಶಾಸಕ ಆನಂದ್ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ಮಹಿಳಾ ಪೇದೆಯನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಅವರು ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ದಂಡ ಹಾಕಿದ್ದೇ ಮುಳುವಾಯ್ತೇ?

ಚುನಾವಣೆ ಸಂದರ್ಭದಲ್ಲಿ ಹೆಲ್ಮೆಟ್ ಹಾಕಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಮಹಿಳಾ ಪೇದೆ ದಂಡ ಹಾಕಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಸ್ಥಳಕ್ಕೆ ಬಂದು ಆನಂದ್ ಅವರು ಆಕ್ರೋಶ ಹೊರಹಾಕಿದ್ದರು. ಅವರು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಚುನಾವಣೆ ಮುಗಿದ ಬಳಿಕ ಮಹಿಳಾ ಪೇದೆಯನ್ನು ಕಡೂರು ಠಾಣೆಯಿಂದ ತರೀಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಹಳೆಯ ದ್ವೇಷಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮಹಿಳಾ ಪೇದೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಧ್ಯೆ, ಶಾಸಕರ ಮನೆಗೆ ತೆರಳಿ ಮಹಿಳಾ ಪೇದೆ ಆಕ್ರೋಶ ವ್ಯಕ್ತಪಡಿಸಿದ್ದರು.

Leave A Reply

Your email address will not be published.

error: Content is protected !!