ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸಬೇಕು ; ಶಾಸಕ ಆರಗ ಜ್ಞಾನೇಂದ್ರ

0 100

ಸಾಗರ : ಬದುಕನ್ನು ಸುಂದರಗೊಳಿಸುವ ಮಾನವೀಯ ಮೌಲ್ಯಗಳನ್ನು ಶಿಕ್ಷಣದಲ್ಲಿ ಕಲಿಸಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸಮೀಪದ ಹೆಗ್ಗೋಡಿನ ಕೇಡಲಸರದಲ್ಲಿ ವಿದ್ಯಾಭಿವೃದ್ಧಿ ಸಂಘದಿಂದ ನಡೆಸುತ್ತಿರುವ ವಿ.ಸಂ.ಪ್ರೌಢಶಾಲೆಯ ವಜ್ರ ಮಹೋತ್ಸವ, ಎಸ್.ರೂಪಶ್ರೀ ಪದವಿಪೂರ್ವ ಕಾಲೇಜಿನ ರಜತ ಮಹೋತ್ಸವ ಹಾಗೂ ಕಾಕಾಲ್ ಪದವಿ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳು ಈ ನಿಯಮಕ್ಕೆ ಬದ್ಧವಾಗಿರಬೇಕು ಎಂದರು.

ಶಿಕ್ಷಣ ಸಂಸ್ಥೆಗಳು ಈಗ ಅಂಗಡಿ, ಹೋಟೆಲ್‌ಗಳಂತೆ ಆರಂಭಗೊಳ್ಳುತ್ತಿದ್ದು, ಉದ್ಯಮವಾಗಿ ರೂಪಾಂತರಗೊಂಡಿವೆ. ದೊಡ್ಡ ಶ್ರೀಮಂತರು ಬಂಡವಾಳ ಹೂಡುವ ಯೋಜನೆಯಾಗಿ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸೇವೆ ಎನ್ನುವುದು ದುರ್ಲಭವಾಗಿದೆ. ಬಹಳಷ್ಟು ಶಿಕ್ಷಣ ಸಂಸ್ಥಾಪಕರಿಗೆ ಶಿಕ್ಷಣದ ಗುರಿ ಗೊತ್ತಿಲ್ಲ ಎಂದರು.

ಶಿಕ್ಷಣದ ಉದ್ದೇಶ ಮನುಷ್ಯನ ಮೃಗೀಯ ಗುಣಗಳನ್ನು ಹೋಗಲಾಡಿಸಿ ಮನುಷ್ಯತ್ವ ತುಂಬುವುದು. ಉನ್ನತ ಶಿಕ್ಷಣ ಪಡೆದು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳನ್ನು ನೋಡುತ್ತಿದ್ದೇವೆ. ಇಂಜಿನಿಯರಿಂಗ್ ಪದವಿ ಪಡೆದ ಯುವಕ ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದಾರೆ ಎಂದರೆ ಇವತ್ತಿನ ಶಿಕ್ಷಣದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ವಿಮಾನ ತರಬೇತಿ ಪಡೆದ ಹೆಗ್ಗೋಡಿನ ಚಂದನ ಎಸ್. ಭಾಗಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸತ್ಯನಾರಾಯಣ ಭಾಗಿ ಮತ್ತು ಶಶಿಕಲಾ ದಂಪತಿಯನ್ನು ಸನ್ಮಾನಿಸಲಾಯಿತು. ವಿ.ಸಂ.ಸಂಸ್ಥೆಯ ಅಧ್ಯಕ್ಷ ಕೇಶವ ಸಂಪೆಕೈ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ರೆಡ್‌ಕ್ರಾಸ್ ರಕ್ತ ನಿಧಿ ಕೇಂದ್ರದ ಅಧ್ಯಕ್ಷ ಡಾ.ಎಚ್.ಎಂ.ಶಿವಕುಮಾರ್, ಎನ್.ಎಸ್.ತಿಮ್ಮಪ್ಪ, ನಾಗರಾಜ್ ಸಭಾಹಿತ್, ಎಂ.ಎಸ್.ನಾಗರಾಜ್, ಬಿ.ಎನ್.ನಾಗರಾಜ, ವಿಠ್ಠಲ ಪೈ, ನಾಗೇಂದ್ರ ಗುಮ್ಮಾನಿ, ಎಂ.ಎಂ.ತಿಮ್ಮಪ್ಪ, ಎ.ಎಸ್.ಗಣಪತಿ ಮತ್ತಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!